ಬಾಗಲಕೋಟೆ: ಗಾಣಿಗ ಜನಾಂಗದವರು ವಂಶಪರಂಪರೆಯಾಗಿ ತಮ್ಮ ಮನೆಯಲ್ಲಿ ಎಣ್ಣೆ ತೆಗೆಯುವ ಗಾಣ ಇಟ್ಟುಕೊಂಡು ಉಪ ಜೀವನ ಸಾಗಿಸುತ್ತಿದ್ದರು. ಆದರೆ ಇಂದಿನ ಆಹಾರ ಶೈಲಿಯಲ್ಲಿನ ಕೆಲ ಬದಲಾವಣೆ ಹಾಗೂ ತಂತ್ರಜ್ಞಾನದ ಹಿನ್ನೆಲೆ ಗಾಣದ ಎಣ್ಣೆ ತೆಗೆಯುವ ಕೆಲಸ ಮೂಲೆ ಗುಂಪಾಗಿದೆ.
ಯಂತ್ರದ ಮೂಲಕ ಎಣ್ಣೆ ತೆಗೆಯುವ ಕಾರ್ಯ ಪ್ರಾರಂಭವಾದ ಬಳಿಕ ಎತ್ತುಗಳಿಂದ ಗಾಣದ ಎಣ್ಣೆ ತೆಗೆಯುವ ಕಾರ್ಯ ಸ್ಥಗಿತಗೊಂಡು ಹಳೆಯ ಸಂಪ್ರದಾಯ ನಶಿಸುತ್ತಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿರುವ ಕೆಲ ಮನೆಯಲ್ಲಿ ಗಾಣವನ್ನು ನೋಡಲು ಮಾತ್ರ ಲಭ್ಯವಿದ್ದು, ಕೇವಲ ಪೂಜೆ, ಪುನಸ್ಕಾರಕ್ಕೆ ಮಾತ್ರ ಸಿಮೀತವಾಗಿದೆ.
ಹಿಂದಿನ ಕಾಲದಲ್ಲಿ ಗಾಣಿಗ ಸಮುದಾಯದವರು ಮನೆಯಲ್ಲೇ ಗಾಣ ಮಾಡಿಕೊಂಡು ಕುಸಬಿ, ಶೇಂಗಾ ಎಣ್ಣೆ ತೆಗೆದು ಮಾರಾಟ ಮಾಡುತ್ತಿದ್ದರು. ಗುಣಮಟ್ಟ ಮತ್ತು ಉತ್ಕೃಷ್ಟ ದರ್ಜೆಯ ಎಣ್ಣೆ ತಯಾರಿಸಿ ಕೆ.ಜಿ. ಗೆ 50 ರೂ. ನಂತೆ ಮಾರಾಟ ಮಾಡುತ್ತಿದ್ದರು. ಆದರೆ ತಂತ್ರಜ್ಞಾನದ ಬಳಕೆಯಿಂದಾಗಿ ಗಾಣಿಗ ಸಮಯದಾಯದ ಕುಲ ಕಸುಬು ಅಳಿವಿನತ್ತ ಸಾಗಿದೆ.
ಮನೆಯಲ್ಲಿ ಗಾಣ ಇದ್ದರೂ ಸಹ ಈಗ ಪೂಜೆಗೆ ಮಾತ್ರ ಸಿಮೀತವಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಎಣ್ಣೆ ತೆಗೆಯುವ ಕಾರ್ಯ ಸ್ಥಗಿತಗೊಂಡಿದೆ ಎಂದು ಕಸ್ತೂರಿವ್ವ ಎಂಬುವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.