ಇವರ ಹೆಸರು ಶ್ರೀಶೈಲ್ ಕೋಗಿಲ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಪುನರ್ವಸತಿ ಕೇಂದ್ರದ ನಿವಾಸಿ. ಇಂದು ಮಾದರಿ ರೈತರಾಗಿರುವ ಇವರು ಮಾಜಿ ಸೈನಿಕ ಹಾಗೂ ನಿವೃತ್ತ ಪೊಲೀಸ್ ಪೇದೆ ಕೂಡ ಹೌದು. ಭಾರತೀಯ ಸೇನೆಯಲ್ಲಿ 17 ವರ್ಷ, ರಾಜ್ಯ ಪೊಲೀಸ್ ಇಲಾಖೆಯಲ್ಲಿ 24 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶ್ರೀಶೈಲ್ ಸದ್ಯ ಭೂತಾಯಿಯ ಸೇವೆಗೈಯುತ್ತಾ ಜೈ ಜವಾನ್ ಜೈ ಕಿಸಾನ್ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ.
ನಿವೃತ್ತಿ ಬಳಿಕ ಎಲ್ಲರಂತೆ ರೆಸ್ಟ್ ಮಾಡದ ಶ್ರೀಶೈಲ್ ಅವರು ಸ್ವಗ್ರಾಮದಲ್ಲಿರುವ ತಮ್ಮ 8 ಎಕರೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ. ಸಾವಯುವ ಕೃಷಿ ಜೊತೆ ನಿತ್ಯ ಹೊಸ ಹೊಸ ಸಂಶೋಧನೆ ಮಾಡುತ್ತಾ ಉತ್ತಮ ಬೆಳೆ ತೆಗೆಯುತ್ತಿದ್ದಾರೆ. ಹೊಲದ ಕೆಲಸಕ್ಕೆ ಬೇರೆ ಜನರನ್ನು ಹಚ್ಚದೇ ಎಲ್ಲ ಕೆಲಸವನ್ನೂ ದಿನಪೂರ್ತಿ ತಾವೇ ಮಾಡುತ್ತಾರೆ. ತಾವೇ ಮಾಡಿಕೊಂಡ ಸೈಕಲ್ ಗಾಲಿಯಿಂದ ಕಸ ತೆಗಿತಾರೆ. ಹೀಗೆ ಮಾಡ್ತಾ ಆರು ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆ ಬೆಳೆದಿದ್ದಾರೆ. ಈ ಫಲವನ್ನು ಕಲ್ಕತ್ತಾ, ಹೈದ್ರಾಬಾದ ಸೇರಿದಂತೆ ಅರಸಿಕೇರಿ ಹಾಗೂ ರಾಜ್ಯದ ವಿವಿಧ ಪ್ರದೇಶಗಳ ಮಾರುಕಟ್ಟೆಗೆ ರಫ್ತು ಮಾಡಿ ಲಾಭ ಗಳಿಸುತ್ತಿದ್ದಾರಂತೆ.
ದಾಳಿಂಬೆ ಬೆಳೆಗೆ ಕೀಟಾನು ಸಮಸ್ಯೆ ಆಗದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರಿಂದ ಇವರ ಬೆಳೆಯತ್ತ ಹುಳುಗಳು ಸುಳಿದೇ ಇಲ್ವಂತೆ. ಸಾವಯವ ಔಷಧಿ ಸೇರಿ ಯಾವೆಲ್ಲ ಔಷಧ ಸಿಂಪಡನೆ ಮಾಡಬೇಕು ಎಂಬ ಮಾಹಿತಿ ಫಲಕವನ್ನು ಹೊಲದಲ್ಲೇ ಅಳವಡಿಸಿದ್ದಾರೆ. ಇನ್ನು ಇದಕ್ಕೂ ಮುನ್ನ ಕಲ್ಲಂಗಡಿ ಬೆಳೆದು ಬೇಸಿಗೆ ಸೀಜನ್ನಲ್ಲಿ ಎರಡೇ ತಿಂಗಳಲ್ಲಿ ಆರು ಲಕ್ಷ ರೂ. ಆದಾಯ ಗಳಿಸಿದ್ದರಂತೆ.
ತೋಟಗಾರಿಕೆ ಬೆಳೆಯಿಂದ ಹೆಚ್ಚು ಲಾಭವಿದೆ ಎಂಬುದನ್ನು ಅರಿತ ಮಾಜಿ ಸೈನಿಕರು, ಕಲ್ಲಂಗಡಿ, ದಾಳಿಂಬೆ, ಬಾಳೆಯಂತಹ ಬೆಳೆ ಕೃಷಿ ಮಾಡಿ ನಗು ಬೀರಿದ್ದಾರೆ. ಜೊತೆಗೆ ಹೊಲದಲ್ಲಿ ಡ್ರಿಪ್ ವ್ಯವಸ್ಥೆ ಮಾಡಿಕೊಂಡಿದ್ದಲ್ಲದೇ, ಬೆಳೆಗೆ ಸಾವಯವ ಗೊಬ್ಬರ ಹಾಗೂ ಗೋಮೂತ್ರ, ಸಗಣಿ, ಬೆಲ್ಲ ಮಿಶ್ರಿತ ಜೀವಾಮೃತ ನೀಡಿ ಫಲವತ್ತಾದ ಬೆಳೆ ಪಡೆಯುತ್ತಿದ್ದಾರೆ.
ಜೈ ಜವಾನ್ ಜೈ ಕಿಸಾನ್ ಎಂದು ಸಾರುತ್ತಿರುವ ರೈತ ಶ್ರೀಶೈಲ್ ಅವರ ಕೃಷಿ ಇತರ ರೈತರಿಗೆ ಮಾದರಿಯಾಗಲಿ. ರೈತರು ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳದೆ, ಲಾಭ ಗಳಿಸಿ ಸುಖ ಸಂಸಾರ ನಡೆಸುವಂತಾಗಲಿ ಎಂಬುದೇ ನಮ್ಮ ಆಶಯ.