ಬಾಗಲಕೋಟೆ : ಸಣಕಲು ದೇಹ ಹೊಂದಿರುವ ಈ ನಾಯಿ, ಬೇಟೆ ಬೆನ್ನತ್ತಿದರೆ ಮಿಸ್ ಆಗೋಕೆ ಚಾನ್ಸೇ ಇಲ್ಲ. ಅಂಥ ನಾಯಿಗೀಗ ಅಸ್ಸಾಂ ರೈಫಲ್ಸ್, ಅಸ್ಸಾಂ ಫಾರೆಸ್ಟ್, ಮೇಘಾಲಯದ BSF ನಿಂದಲೂ ಬೇಡಿಕೆಯಿದೆ.
ನಾಲ್ಕು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಈ ನಾಯಿಯನ್ನು ಸೇರಿಸಿಕೊಳ್ಳುವುದರ ಬಗ್ಗೆ ಚಿಂತನೆ ನಡೆದಿತ್ತು. ಅಂದಿನ ಪಶು ಸಂಗೋಪನಾ ಆಯುಕ್ತರಾದ ಸುರೇಶ್ ಸಂಗಪ್ಪಗೋಳ ಮೊದಲಿಗೆ ಮುಧೋಳ ತಳಿಯ ಆರು ನಾಯಿಗಳನ್ನು ಉತ್ತರಪ್ರದೇಶದಲ್ಲಿರುವ ಮೀರತ್ ನ ಸೈನಿಕ ಪಶುವೈದ್ಯಕೀಯ ತರಬೇತಿ ಕೇಂದ್ರಕ್ಕೆ ಕಳುಹಿಸಿದ್ದರು. ಅಲ್ಲಿ ಮುಧೋಳ ನಾಯಿಗಳಿಗೆ ಬಾಂಬ್ ಪತ್ತೆ ಹಚ್ಚುವಿಕೆ, ಪತ್ತೇದಾರಿ ಚಟುವಟಿಕೆ, ಅಪರಾಧಿ ಪತ್ತೆ ಹಚ್ಚುವಿಕೆ ಹಾಗೂ ಸೈನ್ಯದ ವಿವಿಧ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಿ ಸೈನ್ಯದಲ್ಲಿ ಬಳಸಲಾಗುತ್ತಿದೆ.
ಇದಾದ ನಂತರ ಸಶಸ್ತ್ರ ಸೀಮಾಬಲ, ಇಂಡೊ-ಟಿಬೇಟಿಯನ್ ಬಾರ್ಡರ್, ಸಿಆರ್ಪಿಎಫ್, ಬಿಎಸ್ಎಫ್ ಸೇರಿದಂತೆ ವಿವಿಧ ರಕ್ಷಣಾ ಪಡೆಗಳಲ್ಲಿ ಒಟ್ಟು 18 ಮುಧೋಳ ಶ್ವಾನಗಳು ದೇಶದ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಈಗ ಪುನಃ ವಾಯುಸೇನೆಯಿಂದ ಏಳು ಶ್ವಾನಕ್ಕೆ ಬೇಡಿಕೆ ಬಂದಿರೋದು ಹೆಮ್ಮೆಯ ಸಂಗತಿ.
ವಾಯುಸೇನೆಗೆ ಸದ್ಯ ಜನವರಿ ಕೊನೆ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ನಾಲ್ಕು ಶ್ವಾನ ಮರಿಗಳನ್ನು ನೀಡುವುದಾಗಿ ಮುಧೋಳ ಸಂವರ್ಧನಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ವಾಯು ಸೇನೆಯಿಂದ ಪತ್ರ ವ್ಯವಹಾರ ಕೂಡ ನಡೆದಿದೆಯೆಂದು ಅಧಿಕಾರಿ ತಿಳಿಸಿದ್ದಾರೆ.
ವಾಯುಸೇನೆಯಲ್ಲಿ ಮುಧೋಳ ಶ್ವಾನದ ಕೆಲಸವೇನು?
ವೈಮಾನಿಕ ತರಬೇತಿ ವೇಳೆ ವಿಮಾನಗಳಿಗೆ ಯಾವುದೇ ಪಕ್ಷಿಗಳು ಅಡ್ಡಬಾರದಂತೆ ತಡೆಯುವುದಕ್ಕೆ ನಾಯಿ ಬೊಗಳುವುದನ್ನು ಬಳಸಿಕೊಳ್ಳುವುದು. ವಿಮಾನ ನಿಲ್ಲುವ ಸ್ಥಳಗಳಲ್ಲಿ ಯಾವುದೇ ಪಕ್ಷಿ, ಪ್ರಾಣಿಗಳು ಬಾರದಂತೆ ತಡೆಯುವುದು, ವಾಸನೆ ಗ್ರಹಿಕೆ, ಬೇಹುಗಾರಿಕೆಗೆ ಶ್ವಾನಗಳನ್ನು ಬಳಸಲು ನಿರ್ಧರಿಸಲಾಗಿದೆಯಂತೆ. ಈ ಬಗ್ಗೆ ಆಗ್ರಾದ ವಾಯು ಸೇನೆಯಿಂದ ವಿಂಗ್ ಕಮಾಂಡರ್ ಶ್ರೀನಿವಾಸ್ ಎಂಬುವರು ಕರೆ ಮಾಡಿ ಅಧಿಕಾರಿಗಳ ಜೊತೆ ಮಾತನಾಡಿದ್ದಾರಂತೆ.
ರಾಜ ಮಹಾರಾಜರ ಕಾಲದಲ್ಲಿಯೇ ಈ ಶ್ವಾನ ಪ್ರಖ್ಯಾತಿ ಪಡೆದಿದೆ. ಮುಧೋಳ ಮಹಾರಾಜ ಮಾಲೋಜಿ ರಾವ್ ಈ ಶ್ವಾನವನ್ನು ಹೆಚ್ಚು ಪ್ರಚುರಪಡಿಸಿದ್ದರು. ನಂತರ ಶಿವಾಜಿ ಮಹಾರಾಜರು ತಮ್ಮ ಸೇನೆಯಲ್ಲಿ ಬಳಸಿಕೊಂಡಿದ್ದರು. ಹಲಗಲಿ ಬೇಡರ ಜೊತೆ ಸ್ವಾತಂತ್ರ್ಯ ಹೋರಾಟದಲ್ಲೂ ಈ ನಾಯಿ ಭಾಗಿಯಾಗಿತ್ತಂತೆ.
ಮುಧೋಳ ಶ್ವಾನ ಈಗಾಗಲೇ ಭೂ ಸೇನೆಯಲ್ಲಿ ಗುರುತಿಸಿಕೊಂಡಿದೆ. ಈಗ ವಾಯುಸೇನೆಯೂ ಮುಧೋಳ ಶ್ವಾನ ಪಡೆಯಲು ಮುಂದಾಗಿರುವುದಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಈ ಶ್ವಾನದ ಕಾರ್ಯಕ್ಷಮತೆ ಅರಿತಿರುವ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಸೇರಿಸಿಕೊಳ್ಳಲು ಮುಂದಾಗಿದೆ. ಮೊದಲ ಹಂತವಾಗಿ ಬಾಗಲಕೋಟೆಯ ಜಿಲ್ಲಾ ಪೊಲೀಸ್ ಇಲಾಖೆಗೆ ಒಂದು ಮುಧೋಳ ಶ್ವಾನ ಪಡೆಯಲಿದ್ದೇವೆ. ಬಳಿಕ ಉಳಿದ ಎಲ್ಲ ಜಿಲ್ಲೆಗಳಲ್ಲಿಯೂ ನೀಡುವ ಯೋಜನೆ ಇದೆ ಎಂದು ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದಾರೆ.