ಪ್ಯಾರಿಸ್ : ಭಾನುವಾರ ನಡೆದ ಫ್ರೆಂಚ್ ಓಪನ್ ಫೈನಲ್ನಲ್ಲಿ ಸೋಲುಂಡಿದ್ದ ಗ್ರೀಕ್ ಸ್ಟಾರ್ ಸ್ಟೆಫಾನೊಸ್ ಸಿಟ್ಸಿಪಾಸ್ ಫೈನಲ್ ಪಂದ್ಯಕ್ಕೂ ಮುನ್ನ ತಮ್ಮ ಮನೆಯಲ್ಲಿ ಸಾವು ಸಂಭವಿಸಿತ್ತು ಎಂಬ ಮಾಹಿತಿ ಹೊರ ಹಾಕಿದ್ದಾರೆ. ಚೊಚ್ಚಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಫೈನಲ್ ಪ್ರವೇಶಿಸಿದ್ದ ಸಿಟ್ಸಿಪಾಸ್ ವಿಶ್ವದ ನಂಬರ್ 1 ನೊವಾಕ್ ಜೋಕೊವಿಕ್ ಎದುರು 6-7 (6/8), 2-6, 6-3, 6-2, 6-4ರಿಂದ ಸೋತರು.
ಆದರೆ, ಪಂದ್ಯದ ನಂತರ ಅವರು ತಮ್ಮ ಪ್ರೀತಿ ಪಾತ್ರರಾದ ಅಜ್ಜಿಯನ್ನು ಕಳೆದುಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅಜ್ಜಿ ಸಾವಿನ ವಿಷಯವನ್ನು ಪ್ರಸ್ತಾಪಿಸಿದ್ದು, ನೋವಿನಲ್ಲಿ ಆಡಿರುವುದಕ್ಕೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೀವನವು ಗೆಲ್ಲುವುದು ಅಥವಾ ಸೋಲುವುದಲ್ಲ. ಇದು ಒಂಟಿಯಾಗಿರಲಿ ಅಥವಾ ಇತರರೊಂದಿಗಾಗಲಿ ಜೀವನದ ಪ್ರತಿ ಕ್ಷಣವನ್ನೂ ಆನಂದಿಸುವುದಾಗಿದೆ.
ದುಃಖ ಮತ್ತು ಆಕ್ಷೇಪಣೆಗಳಿಲ್ಲದೆ ಅರ್ಥಪೂರ್ಣ ಜೀವನವನ್ನು ನಡೆಸುವುದಾಗಿದೆ. ಟ್ರೋಫಿಯನ್ನು ಎತ್ತುವುದು ಮತ್ತು ವಿಜಯವನ್ನು ಆಚರಿಸುವುದು ಸಹ ಪ್ರಮುಖ ಭಾಗವಾಗಿದೆ. ಆದರೆ, ಅದೇ ಎಲ್ಲವೂ ಅಲ್ಲ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಅಂಗಳಕ್ಕೆ ಇಳಿಯುವ ಐದು ನಿಮಿಷಗಳ ಮೊದಲು, ನನ್ನ ಪ್ರೀತಿಯ ಅಜ್ಜಿ ಸಾವನ್ನಪ್ಪಿರುವ ಸುದ್ದಿ ಕೇಳಿದೆ. ಅವರು ಜೀವನದಲ್ಲಿ ನಂಬಿಕೆ ಹೊಂದಿದ್ದ ಬುದ್ಧಿವಂತ ಮಹಿಳೆ.
ಎಲ್ಲವನ್ನೂ ತ್ಯಾಗ ಮಾಡಲು ಯಾವಾಗಲೂ ಸಿದ್ಧಳಾಗಿದ್ದಳು. ನನ್ನ ಜೀವನದಲ್ಲಿ ಅಂತಹ ವ್ಯಕ್ತಿತ್ವಯುಳ್ಳ ಯಾರನ್ನು ನಾನು ಭೇಟಿ ಮಾಡಿಲ್ಲ. ಈ ಜಗತ್ತಿನಲ್ಲಿ ಅವರಂತಹ ಹೆಚ್ಚಿನ ಜನರನ್ನು ನಾವು ಪಡೆಯಬೇಕು. ಏಕೆಂದರೆ, ಅವರಂತಹ ಜನರು ನಿಮ್ಮನ್ನು ಜೀವಂತವಾಗಿರಿಸುತ್ತಾರೆ. ಅವರು ನಿಮಗೆ ಕನಸು ಕಾಣಲು ಅವಕಾಶ ಮಾಡಿಕೊಡುತ್ತಾರೆ.
ಹಾಗಾಗಿ, ನನ್ನೆಲ್ಲಾ ಸಾಧನೆಯನ್ನು ಅವರಿಗೆ ಅರ್ಪಿಸುತ್ತೇನೆ ಎಂದು ಸಿಟ್ಸಿಪಾಸ್ ತಮ್ಮ ನೋವನ್ನು ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ತಂದೆಯನ್ನು ಬೆಳೆಸಿದ್ದಕ್ಕೆ ನಾನು ಅವಳಿಗೆ ಧನ್ಯವಾದ ತಿಳಿಸುತ್ತೇನೆ. ಏಕೆಂದರೆ, ನನ್ನ ತಂದೆ ಇಲ್ಲದೆ ನನ್ನಿಂದ ಯಾವುದೂ ಸಾಧ್ಯವಾಗುತ್ತಿರಲಿಲ್ಲ ಎಂದು 5ನೇ ಶ್ರೇಯಾಂಕದ ಆಟಗಾರ ತಿಳಿಸಿದ್ದಾರೆ.
ಇದನ್ನು ಓದಿ: WATCH: 2 ಸೆಟ್ ಸೋತರು ತಮ್ಮನ್ನು ಬೆಂಬಲಿಸುತ್ತಿದ್ದ ಪುಟ್ಟ ಅಭಿಮಾನಿಗೆ ಜೋಕೊವಿಕ್ ಉಡುಗೊರೆ