ಪ್ಯಾರಿಸ್: ಅಮೆರಿಕಾದ 4ನೇ ಶ್ರೇಯಾಂಕಿತೆ ಹಾಗೂ 2ನೇ ಗ್ರ್ಯಾಂಡ್ಸ್ಲಾಮ್ನ ಮೇಲೆ ಕಣ್ಣಿರುವ ಸೋಫಿಯಾ ಕೆನಿನ್ ಹಾಗೂ ವೃತ್ತಿ ಜೀವನದ ಮೊದಲ ಗ್ರ್ಯಾಂಡ್ಸ್ಲಾಮ್ ಕನಸಿನಲ್ಲಿರುವ ಪೋಲೆಂಡ್ನ ಇಗಾ ಸ್ವಿಯಾಟಿಕ್ ಇಂದು ನಡೆಯಲಿರುವ ಫ್ರೆಂಚ್ ಓಪನ್ ಮೆಗಾ ಫೈನಲ್ನಲ್ಲಿ ಕಾದಾಡಲಿದ್ದಾರೆ.
ಕೆನಿನ್ ಸೆಮಿಫೈನಲ್ನಲ್ಲಿ 6-4, 7-5ರಲ್ಲಿ 2 ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ವಿಜೇತೆ ಪೆಟ್ರಾ ಕ್ವಿಟೋವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರೆ, ಸ್ವಿಯಾಟೆಕ್ ಅರ್ಜೆಂಟೈನಾದ ನಡಿಯಾ ಪೊಡೊರೊಸ್ಕಾ ವಿರುದ್ಧ ಗೆದ್ದು ಪ್ರಥಮ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಸನಿಹ ತಲುಪಿದ್ದಾರೆ.
4ನೇ ಶ್ರೇಯಾಂಕಿತೆ ಕೆನಿನ್ ಈಗಾಗಲೇ ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಗೆದ್ದು ಗಮನ ಸೆಳೆದಿದ್ದರೆ, 54ನೇ ಶ್ರೇಯಾಂಕದ ಸ್ವಿಯಾಟೆಕ್ ತಾನಾಡುತ್ತಿರುವ 7ನೇ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ.
ಶ್ರೇಯಾಂಕರಹಿತೆಯಾಗಿ ಕಣಕ್ಕಿಳಿದ ಸ್ವಿಯಾಟೆಕ್ ಟೂರ್ನಿಯಲ್ಲಿ ಇದುವರೆಗೆ ಒಂದೂ ಸೆಟ್ ಸೋಲದೆ ಫೈನಲ್‌ಗೇರಿರುವುದು ಗಮನಾರ್ಹ. ಇದುವರೆಗಿನ 6 ಎದುರಾಳಿಗಳಿಗೆ ಒಟ್ಟು 23 ಗೇಮ್ ಮಾತ್ರ ಬಿಟ್ಟುಕೊಟ್ಟಿದ್ದಾರೆ. 2007ರಲ್ಲಿ ಜಸ್ಟಿನ್ ಹೆನಿನ್ ಜಯಿಸಿದ ಬಳಿಕ ಇದುವರೆಗೆ ಪ್ಯಾರಿಸ್‌ನಲ್ಲಿ ಯಾವ ಆಟಗಾರ್ತಿಯೂ ಒಂದೂ ಸೆಟ್ ಸೋಲದೆ ಪ್ರಶಸ್ತಿ ಜಯಿಸಿಲ್ಲ.
ಆದರೆ ಶುಕ್ರವಾರ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಆಡಿದ ಬಳಲಿಕೆಯ ನಡುವೆಯೂ ಶನಿವಾರ ಫೈನಲ್ ಪಂದ್ಯದಲ್ಲಿ ಸಿಂಗಲ್ಸ್ ಪ್ರಶಸ್ತಿಗಾಗಿ ಹೋರಾಡಬೇಕಾದ ಸವಾಲು ಹೊಂದಿದ್ದಾರೆ.