ಪ್ಯಾರಿಸ್: ಬುಧವಾರ ಕ್ಯಾರೆನೊ ಬುಸ್ಟಾ ಅವರನ್ನು ಮಣಿಸಿದ ಸರ್ಬಿಯಾದ ನೊವಾಕ್ ಜೋಕೊವಿಕ್ 2020ರ ಫ್ರೆಂಚ್ ಓಪನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ವಿಶ್ವದ ನಂಬರ್ ಒನ್ ಆಟಗಾರನಾಗಿರುವ ಜೋಕೊವಿಕ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಫ್ಆಬ್ಲೋ ಕ್ಯಾರೆನೊ ಬುಸ್ಟಾ ಅವರನ್ನು 4-6, 6-2,6-3, 6-4ರಲ್ಲಿ ಮಣಿಸಿ ವೃತ್ತಿ ಜೀವನದ 2ನೇ ಫ್ರೆಂಚ್ ಓಪನ್ ಹಾಗೂ 18ನೇ ಗ್ರ್ಯಾಂಡ್ಸ್ಲಾಮ್ಗೆ ಹತ್ತಿರವಾಗಿದ್ದಾರೆ.
ಯುಎಸ್ ಓಪನ್ ಸೆಮಿಫೈನಲ್ನಲ್ಲಿ ಲೈನ್ ಅಂಪೈರ್ಗೆ ಕುತ್ತಿಗೆಗೆ ಆಕಸ್ಮಿಕವಾಗಿ ಚೆಂಡು ಹೊಡೆದಿದ್ದ ಜೋಕೊವಿಕ್ ಆ ಪಂದ್ಯದಿಂದ ಅನರ್ಹಗೊಂಡಿದ್ದರು. ಅದಕ್ಕಾಗಿ ಈ ಪಂದ್ಯವನ್ನು ಬುಸ್ಟಾ ಹಾಗೂ ಜೋಕೊವಿಕ್ ನಡುವಿನ ಮರುಪಂದ್ಯ ಎಂದೇ ಭಾವಿಸಲಾಗಿತ್ತು. ಇಲ್ಲಿ ಮೊದಲ ಸೆಟ್ ಸೋತರೂ ಶಾಂತ ರೀತಿಯಿಂದ ಆಡಿದ ಜೋಕೊವಿಕ್ ನಂತರದ ಮೂರು ಸೆಟ್ಗಳನ್ನು ಗೆದ್ದು ಸೆಮಿಗೆ ಪ್ರವೇಶ ಪಡೆದರು.
17 ಗ್ರ್ಯಾಂಡ್ ಸ್ಲಾಮ್ಗಳ ಒಡೆಯ ನಾಲ್ಕರ ಘಟ್ಟದಲ್ಲಿ ಗ್ರೀಸ್ನ ಸ್ಟೆಫಾನೋಸ್ ಸಿಟ್ಟಿಪಾಸ್ ಅವರ ಸವಾಲನ್ನು ಎದುರಿಸಲಿದ್ದಾರೆ. ಸಿಟ್ಸಿಪಾಸ್ ಅವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಷ್ಯಾದ ಆ್ಯಂಡ್ರೆ ರುಬ್ಲೆವ್ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ಮತ್ತು ಅರ್ಜೆಂಟೈನಾದ ಡೀಗೋ ಸ್ವಾರ್ಟ್ಜ್ಮನ್ ಶುಕ್ರವಾರ ಕಾದಾಡಲಿದ್ದಾರೆ.