ಬೀಜಿಂಗ್: ನಾನು ಯಾರ ಮೇಲೆಯೂ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಲ್ಲ ಮತ್ತು ವಿದೇಶ ಪ್ರವಾಸಕ್ಕೂ ಹೋಗುವುದಿಲ್ಲ ಎಂದು ಚೀನಾದ ಒಲಿಂಪಿಯನ್ ಟೆನಿಸ್ ಆಟಗಾರ್ತಿ ಪೆಂಗ್ ಶುವಾಯ್ ಸ್ಪಷ್ಟಪಡಿಸಿದ್ದಾರೆ. ಚೀನಾದ ಕಮ್ಯುನಿಷ್ಟ್ ನಾಯಕ ಜಾಂಗ್ ಗೌಲಿ ಮೇಲೆ ಶುವಾಯ್ ಈ ಹಿಂದೆ ಗಂಭೀರ ಆರೋಪ ಮಾಡಿದ್ದರು.
ಮೊದಲನೆಯದಾಗಿ, ಈ ಒಂದು ಪ್ರಮುಖ ವಿಷಯದ ಬಗ್ಗೆ ಒತ್ತಿಹೇಳುವುದು ಮುಖ್ಯವಾಗಿದೆ. ಯಾರೊಬ್ಬರೂ ನನ್ನ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ನಾನು ಎಂದೂ ಕೂಡ ಹೇಳಿಲ್ಲ ಅಥವಾ ಬರೆದಿಲ್ಲ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪೆಂಗ್ ಹೇಳಿದ್ದಾರೆ.
ವೈಬೊ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಯಿಂದ ಡಿಲಿಟ್ ಮಾಡಲಾದ ಲೈಂಗಿಕ ದೌರ್ಜನ್ಯದ ಆರೋಪಗಳ ಕುರಿತಾದ ಪೋಸ್ಟ್ ಬಗ್ಗೆ ಅವರು ಸ್ಪಷ್ಟನೆ ನೀಡಿದರು. ಅದು ನನ್ನ 'ವೈಯಕ್ತಿಕ ವಿಚಾರ', ಈ ಬಗ್ಗೆ ತಪ್ಪಾಗಿ ಅರ್ಥೈಸಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ತಾವು ಎಲ್ಲಿಗೂ ತೆರಳದೆ ಬೀಜಿಂಗ್‌ನಲ್ಲೇ ವಾಸಿಸುತ್ತಿದ್ದು, ವಿದೇಶ ಪ್ರಯಾಣದ ಬಗ್ಗೆಯೂ ಯೋಚಿಸುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Sexual Assault Row : ಚೀನಾದ ಟೆನಿಸ್ ತಾರೆ ಪೆಂಗ್ ಶುವಾಯ್ ಪ್ರತ್ಯಕ್ಷ
ಜಾಂಗ್ ಗೌಲಿ ವಿರುದ್ಧ ಶುವಾಯ್ ಲೈಂಗಿಕ ದೌರ್ಜನ್ಯ ಆರೋಪ ಸುದ್ದಿ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿತ್ತು. ಚೀನಾದ 'ಮಿ ಟೂ' ಭಾಗವಾಗಿ ಬೆಳಕಿಗೆ ಬಂದ ಈ ಪ್ರಕರಣದ ಬಗ್ಗೆ ಭಾರಿ ಗೌಪ್ಯತೆ ಕಾಪಾಡಿಕೊಂಡು ಬರಲಾಗುತ್ತಿದೆ.
ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕೆಲ ದಿನಗಳವರೆಗೆ ಪೆಂಗ್ ಶುವಾಯ್ ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿತ್ತು. ಬಳಿಕ ಕೆಲದಿನಗಳ ಹಿಂದೆ ಅವರೊಂದಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮುಖ್ಯಸ್ಥರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದರು.
ಇದನ್ನೂ ಓದಿ: ಸುರಕ್ಷಿತವಾಗಿರುವುದಾಗಿ IOCಗೆ ದೃಢಪಡಿಸಿದ ಚೀನಾ ಟೆನಿಸ್ ಆಟಗಾರ್ತಿ ಪೆಂಗ್ ಶುವಾಯ್