ದುಬೈ: ಐಸಿಸಿ ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಮುಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಾಟ ನಡೆಸಲಿದ್ದು, ಅದಕ್ಕೂ ಮುಂಚಿತವಾಗಿ ತಂಡಕ್ಕೆ ಗುಡ್ನ್ಯೂವೊಂದು ಸಿಕ್ಕಿದೆ.
ಪಾಕ್ ವಿರುದ್ಧದ ಪಂದ್ಯದ ವೇಳೆ ಭುಜದ ನೋವಿಗೊಳಗಾಗಿ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯಾ ಈಗಾಗಲೇ ಸಂಪೂರ್ಣವಾಗಿ ಫಿಟ್ ಆಗಿದ್ದು, ಸದ್ಯ ನೆಟ್ನಲ್ಲಿ ಬೌಲಿಂಗ್ ಅಭ್ಯಾಸ ಆರಂಭ ಮಾಡಿದ್ದಾರೆ. ಹೀಗಾಗಿ ಟೀಂ ಇಂಡಿಯಾಗೆ ಮತ್ತೊಂದು ಬತ್ತಳಿಕೆ ಸಿಕ್ಕಿದೆ.
ಇದನ್ನೂ ಓದಿರಿ: ಟಿ-20 ವಿಶ್ವಕಪ್: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯಾ ಫಿಟ್!
ಕಳೆದ ಜುಲೈ ತಿಂಗಳಲ್ಲಿ ಕೊನೆಯದಾಗಿ ಬೌಲಿಂಗ್ ಮಾಡಿದ್ದ ಹಾರ್ದಿಕ್ ಪಾಂಡ್ಯಾ, ತದನಂತರ ಐಪಿಎಲ್ನ ಯಾವುದೇ ಪಂದ್ಯದಲ್ಲೂ ಬೌಲಿಂಗ್ ಮಾಡಿರಲಿಲ್ಲ. ಹೀಗಾಗಿ ಅವರ ಬಗ್ಗೆ ಅನೇಕ ರೀತಿಯ ಟೀಕೆಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಬೌಲಿಂಗ್ ಮಾಡಲು ಶುರು ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯಾ ಬೌಲಿಂಗ್ ಮಾಡ್ತಿದ್ದ ವೇಳೆ ಕೋಚ್ ರವಿಶಾಸ್ತ್ರಿ ಹಾಗೂ ಮೆಂಟರ್ ಮಹೇಂದ್ರ ಸಿಂಗ್ ಧೋನಿ ಪರಿಶೀಲನೆ ನಡೆಸಿದರು.
ನೆಟ್ನಲ್ಲಿ ಸುಮಾರು 20 ನಿಮಿಷಗಳ ಕಾಲ ಬೌಲಿಂಗ್ ಮಾಡಿರುವ ಹಾರ್ದಿಕ್ ಪಾಂಡ್ಯಾ, ಮತ್ತೊಮ್ಮೆ ಹಳೆಯ ಲಯಕ್ಕೆ ಮರಳುತ್ತಿರುವುದು ತಂಡಕ್ಕೆ ಶುಭಸುದ್ಧಿ ಆಗಿದ್ದು, ಬೌಲಿಂಗ್ ಜೊತೆಗೆ ಫಿನಿಷರ್ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆ.
ಈಗಾಗಲೇ ವಿಶ್ವಕಪ್ ಅಭಿಯಾನದಲ್ಲಿ ಟೀಂ ಇಂಡಿಯಾ ತಾನು ಆಡಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಕಂಡಿರುವ ಕಾರಣ, ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಬೇಕಾದ ಅನಿವಾರ್ಯತೆಯಲ್ಲಿದೆ.