ಟೋಕಿಯೋ ಒಲಿಂಪಿಕ್ಸ್ ರದ್ದತಿ ಬಗ್ಗೆ ಕೇಳಿ ಬರುತ್ತಿರುವ ಎಲ್ಲಾ ಊಹಾಪೋಹಗಳನ್ನು ತಳ್ಳಿ ಹಾಕಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅಧ್ಯಕ್ಷ ಥಾಮಸ್ ಬಾಕ್, ಟೋಕಿಯೊ ಒಲಿಂಪಿಕ್ಸ್ ನಡೆಸಲು ಸಂಪೂರ್ಣ ಬದ್ಧರಾಗಿರುವುದಾಗಿ ತಿಳಿಸಿದರು.
"2020ರ ಟೋಕಿಯೊ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟವನ್ನು ಯಶಸ್ವಿ ಮತ್ತು ಸುರಕ್ಷಿತವಾಗಿ ನಡೆಸುವುದಕ್ಕೆ ಸಂಪೂರ್ಣ ಗಮನ ಹರಿಸಿದ್ದೇವೆ. ಜುಲೈ 23 ರಿಂದ ಒಲಿಂಪಿಕ್ ಕ್ರೀಡಾಕೂಟ ಮತ್ತು ಆಗಸ್ಟ್ 24 ರಂದು ಪ್ಯಾರಾಲಿಂಪಿಕ್ ಕ್ರೀಡಾಕೂಟ ಪ್ರಾರಂಭವಾಗಲಿದೆ" ಎಂದರು.
"ಕಳೆದೆರಡು ದಿನಗಳಿಂದ ನಾವು ಅಂತಾರಾಷ್ಟ್ರೀಯ ಫೆಡರೇಷನ್‌ಗಳು ಮತ್ತು ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳೊಂದಿಗೆ ಸಮಾಲೋಚನೆ ಮಾಡಿದ್ದೇವೆ. ಕ್ರೀಡಾಪಟುಗಳ ಪ್ರತಿನಿಧಿಗಳಿಂದ ವರದಿಗಳನ್ನೂ ಸಹ ಪಡೆದುಕೊಂಡಿದ್ದೇವೆ. ಅವರೆಲ್ಲರೂ ಒಲಿಂಪಿಕ್ಸ್ಗಾಗಿ ಸಂಪೂರ್ಣವಾಗಿ ಒಗ್ಗಟ್ಟು ಮತ್ತು ಬದ್ಧರಾಗಿರುವುದು ನಮ್ಮ ಅನುಭವಕ್ಕೆ ಬಂದಿದೆ" ಎಂದರು.
"ಅಲ್ಲದೆ ಎಲ್ಲಾ 206 ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳು, ಅಂತಾರಾಷ್ಟ್ರೀಯ ಒಕ್ಕೂಟಗಳು ಮತ್ತು ಕ್ರೀಡಾಪಟುಗಳು ಈ ಒಲಿಂಪಿಕ್ ಕ್ರೀಡಾಕೂಟದ ಬೆನ್ನಿಗೆ ನಿಂತಿದ್ದಾರೆ. ಜಪಾನ್ ಸರ್ಕಾರ, ಸಂಘಟನಾ ಸಮಿತಿ ಮತ್ತು ಜಪಾನ್ ಒಲಿಂಪಿಕ್ ಸಮಿತಿಯ ಕಡೆಯಿಂದಲೂ ನಾವು ಅದೇ ಬದ್ಧತೆಯನ್ನು ಎದುರು ನೋಡುತ್ತೇವೆ "ಎಂದು ಅವರು ಹೇಳಿದರು.
ಒಲಿಂಪಿಕ್ಸ್ ರದ್ಧತಿಯ ಬಗ್ಗೆ ಹಾಗೂ ಪ್ಲಾನ್ ಬಿ ಬಗ್ಗೆ ಕೇಳಿದ್ದೇನೆ. ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟವನ್ನು 2032 ಕ್ಕೆ ಮುಂದೂಡುವ ಪ್ರಸ್ತಾಪವನ್ನು ಕೆಲವರು ಮಾಡುತ್ತಾರೆ. ಇಂತಹ ಊಹಾಪೋಹಗಳಿಂದ ಒಲಿಂಪಿಕ್ಸ್ ಸಿದ್ಧತೆಯಲ್ಲಿರುವ ತೊಂದರೆಯಾಗಲಿದೆ. ಒಲಿಂಪಿಕ್ಸ್ನಂತ ಕ್ರೀಡಾಕೂಟವನ್ನು ಸ್ಥಳಾಂತರಿಸುವುದು ಅಸಾಧ್ಯ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ ಎಂದು ಭಾವಿಸುವುದಾಗಿ ಅವರು ತಿಳಿಸಿದ್ದಾರೆ.
ಈಗಿರುವ ಸ್ವಲ್ಪ ಸಮಯದಲ್ಲಿ ನಾವು ಇಂತಹ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳವುದಕ್ಕೆ ಆಗುವುದಿಲ್ಲ. ನಾವು ಸಂಪೂರ್ಣವಾಗಿ ಜುಲೈ 23ರಂದು ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಕಡೆಗೆ ಗಮನ ನೀಡುತ್ತಿರುವುದಾಗಿ ಹಾಗೂ ಅದರ ಸಿದ್ಧತೆಯಲ್ಲಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿರುವ ದಾದಾ: ವರದಿ ಬಂದ ನಂತರ ಸ್ಟಂಟ್ ಅಳವಡಿಕೆ ಬಗ್ಗೆ ನಿರ್ಧಾರ