ವಾಷಿಂಗ್ಟನ್: 23 ಸಲ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಸೆರೆನಾ ವಿಲಿಯಮ್ಸ್ ಟೆನಿಸ್ನಿಂದ ನಿವೃತ್ತಿ ಘೋಷಿಸುವ ಸುಳಿವು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವರ್ಷದ ಅಂತಿಮ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿ ಬಳಿಕ ಟೆನಿಸ್ ತ್ಯಜಿಸಲು ಯೋಚಿಸುತ್ತಿರುವುದಾಗಿ ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
2021ರ ಫ್ರೆಂಚ್ ಓಪನ್ ನಂತರ ಟೆನಿಸ್ ಅಖಾಡಕ್ಕಿಳಿದಿದ್ದ ಸೆರೆನಾ ತಮ್ಮ ಹಳೆಯ ಶೈಲಿಯ ಆಟ ಆಡುತ್ತಿಲ್ಲ. ಹೀಗಾಗಿ, ಈ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. "ನಾನು ಮುಂದಿನ ಹೆಜ್ಜೆ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಜೀವನದಲ್ಲಿ ಬೇರೆ ದಿಕ್ಕಿನಲ್ಲಿ ಚಲಿಸುವ ಸಮಯ ಬಂದಿದೆ" ಎಂದು ಅವರು ತಿಳಿಸಿದ್ದಾರೆ.
"ನಾವು ತುಂಬಾ ಪ್ರೀತಿಸಿದ್ದನ್ನು ತೊರೆಯುವ ಸಮಯ ಯಾವಾಗಲೂ ಕಷ್ಟಕರವಾಗಿರುತ್ತದೆ. ನಿವೃತ್ತಿ ಎಂಬ ಪದವನ್ನು ನಾನು ಎಂದಿಗೂ ಇಷ್ಟಪಟ್ಟಿಲ್ಲ" ಎಂದಿದ್ದಾರೆ. ಸೆರೆನಾ 1999, 2002, 2008, 2012, 2013, 2014 ಸೇರಿದಂತೆ ಒಟ್ಟು ಆರು ಸಲ ಯುಎಸ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. 10 ಸಲ ಯುಎಸ್ ಓಪನ್ನಲ್ಲಿ ಫೈನಲ್ಗೆ ಲಗ್ಗೆ ಹಾಕಿದ್ದಾರೆ.
ಇದನ್ನೂ ಓದಿ: 2020 ಫ್ರೆಂಚ್ ಓಪನ್ನಿಂದ ಸ್ಟಾರ್ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸನ್ ಔಟ್!
ವಿಶ್ವದಾಖಲೆಯ 24ನೇ ಗ್ರ್ಯಾಂಡ್ ಸ್ಲಾಮ್ ಮೇಲೆ ಕಣ್ಣಿಟ್ಟಿದ್ದ ಅಮೆರಿಕದ ಸ್ಟಾರ್ ಟೆನ್ನಿಸ್ ಆಟಗಾರ್ತಿ ಗಾಯದ ತೊಂದರೆಗೊಳಗಾಗಿ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.