ಹ್ಯಾಂಗ್‌ಝೌ (ಚೀನಾ): ಇಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಅಭೂತಪೂರ್ವ ಸಾಧನೆ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಕ್ರೀಡಾಪಟುಗಳು, ಚಿನ್ನ ಸೇರಿದಂತೆ ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಈ ಬಾರಿ ಭಾರತದ ಪದಕಗಳ ಸಂಖ್ಯೆ 100ರ ಗಡಿ ದಾಟುವ ನಿರೀಕ್ಷೆ ಇದೆ. ಸದ್ಯ 85 ಪದಕಗಳು ಭಾರತದ ಬುಟ್ಟಿಯಲ್ಲಿವೆ. ಬುಧವಾರ (ನಿನ್ನೆ) ಒಂದೇ ದಿನ 12 ಪದಕಗಳು ಭಾರತಕ್ಕೆ ಒಲಿದಿದ್ದು ವಿಶೇಷವಾಗಿತ್ತು. ಪ್ರಸಕ್ತ ಸಾಲಿನ ಕ್ರೀಡಾಕೂಟದ ಮುಕ್ತಾಯಕ್ಕೆ ಇನ್ನು ಮೂರು ದಿನ ಬಾಕಿ ಇದ್ದು ಹಲವು ಅಥ್ಲೀಟ್‌ಗಳು ಮತ್ತಷ್ಟು ಪದಕಗಳನ್ನು ಗೆಲ್ಲುವ ಭರವಸೆ ಇದೆ.
ಸ್ಕ್ವ್ಯಾಷ್: ಸ್ಕ್ವಾಷ್‌ನಲ್ಲಿ ಭಾರತೀಯ ಆಟಗಾರರು ಪಾರಮ್ಯ ಮೆರೆದಿದ್ದಾರೆ. ಇಂದು ನಡೆದ ಮಿಶ್ರ ಡಬಲ್ಸ್ ವಿಭಾಗದಲ್ಲಿ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಸಂಧು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಪುರುಷರ ಸಿಂಗಲ್ಸ್‌ನಲ್ಲಿ ಮತ್ತೊಂದು ಪದಕ ಖಚಿತವಾಗಿದೆ.
ಕುಸ್ತಿ: ಕುಸ್ತಿಯ ಪ್ರೀಸ್ಟೈಲ್ ವಿಭಾಗ ಭಾರತಕ್ಕೆ ಹೆಚ್ಚು ಪದಕಗಳನ್ನು ತಂದುಕೊಡುವ ಕ್ರೀಡೆ. ಅಂತಿಮ್ ಪಂಘಲ್ ಮತ್ತು ಪೂಜಾ ಗೆಹ್ಲೋಟ್ ಅವರಂತಹ ಅನುಭವಿ ಕುಸ್ತಿಪಟುಗಳು ಕಣಕ್ಕಿಳಿಯಲಿದ್ದು ಮತ್ತೆರಡು ಪದಕ ಜಯಿಸುವ ಭರವಸೆ ಹೆಚ್ಚಿಸಿದ್ದಾರೆ. ಇದಲ್ಲದೆ, ಕಿರಣ್ ಮತ್ತು ಬಜರಂಗ್ ಪುನಿಯಾ ಕ್ರಮವಾಗಿ 65 ಕೆ.ಜಿ ಮತ್ತು 76 ಕೆ.ಜಿ ವಿಭಾಗಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಪುರುಷರ ಪ್ರೀಸ್ಟೈಲ್ 86 ಕೆ.ಜಿ ಮತ್ತು 125 ಕೆ.ಜಿ ವಿಭಾಗಗಳಲ್ಲಿ ದೀಪಕ್ ಪುನಿಯಾ ಮತ್ತು ಸುಮಿತ್ ಕೂಡಾ ಪ್ರಬಲರು. ಇಂದು ಪ್ರೀಸ್ಟೈಲ್ ನಡೆಯುತ್ತಿದ್ದು ಇವರೂ ಸೇರಿ ಇತರ ಕುಸ್ತಿಪಟುಗಳು ಬಂಗಾರದ ನಿರೀಕ್ಷೆಯಲ್ಲಿದ್ದಾರೆ.
ಹಾಕಿ: ಪುರುಷರ ಮತ್ತು ಮಹಿಳಾ ಹಾಕಿ ತಂಡಗಳೆರಡೂ ತಮ್ಮ ಪ್ರಾಬಲ್ಯ ಸಾಧಿಸುವಲ್ಲಿ ಮುಂದಿವೆ. ಪುರುಷರ ತಂಡ ಫೈನಲ್ಗೆ ಲಗ್ಗೆ ಇಡುವ ಮೂಲಕ ಪದಕ ಖಾತ್ರಿಪಡಿಸಿಕೊಂಡಿದ್ದು, ಮಹಿಳಾ ತಂಡ ಸೆಮಿಫೈನಲ್ನಲ್ಲಿ ಅಜೇಯರಾಗುಳಿಯುವ ಮೂಲಕ ಮತ್ತೊಂದು ಪದಕದ ಭರವಸೆಯಲ್ಲಿದೆ.
ಬಿಲ್ಲು: ಆರ್ಚರಿ ವಿಭಾಗವೂ ದೇಶಕ್ಕೆ ಹೆಚ್ಚು ಪದಕಗಳನ್ನು ತಂದುಕೊಡುವ ಕ್ರೀಡೆ. ಇಂದು ನಡೆದ ಮಹಿಳಾ ಫೈನಲ್‌ನಲ್ಲಿ ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರು, ಚೈನೀಸ್ ತೈಪೆ ತಂಡವನ್ನು (ತೈವಾನ್) ಸೋಲಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಈ ಬೆನ್ನಲ್ಲೇ ನಡೆದ ಫೈನಲ್‌ನಲ್ಲಿ ಕೊರಿಯಾ ತಂಡವನ್ನು ಸೋಲಿಸಿದ ಅಭಿಷೇಕ್, ಓಜಸ್ ಮತ್ತು ಪ್ರಥಮೇಶ್ ತಂಡವು ಚಿನ್ನದ ಪದಕ ಗೆದ್ದರು.
ಕ್ರಿಕೆಟ್: ಕ್ರಿಕೆಟ್ನಲ್ಲಿ ಭಾರತೀಯ ಮಹಿಳಾ ತಂಡ ಈಗಾಗಲೇ ಚಿನ್ನ ಜಯಿಸಿದೆ. ರುತುರಾಜ್ ಗಾಯಕ್ವಾಡ್ ನೇತೃತ್ವದ ಪುರುಷರ ತಂಡವೂ ಚಿನ್ನ ಗೆಲ್ಲುವ ನಿರೀಕ್ಷೆ ಇದೆ. ಅಕ್ಟೋಬರ್ 7ರಂದು ಫೈನಲ್ ಪಂದ್ಯ ನಡೆಯಲಿದೆ.
ಕಬಡ್ಡಿ: ಪುರುಷರ ಮತ್ತು ಮಹಿಳಾ ತಂಡಗಳೆರಡೂ ಚಿನ್ನದ ಪದಕಗಳಿಗಾಗಿ ಪ್ರಬಲ ಸ್ಪರ್ಧಿಯೊಡ್ಡಿವೆ. ಥಾಯ್ಲೆಂಡ್ ವಿರುದ್ಧ ಭಾರತೀಯ ಪುರುಷರ ಕಬಡ್ಡಿ ತಂಡ 37 ಅಂಕಗಳ ಭರ್ಜರಿ ಜಯ ಸಾಧಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿತು. ಮಹಿಳೆಯರ ತಂಡವು ತನ್ನ ಗುಂಪು ಹಂತದ ಎರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 56-23 ಅಂಕಗಳ ಅಂತರದಿಂದ ಗೆಲುವು ದಾಖಲಿಸಿದೆ. ಅಗ್ರ ಸ್ಥಾನಕ್ಕಾಗಿ ಪೈಪೋಟಿ ನಡೆದಿದ್ದು ಎರಡು ಪದಕಗಳನ್ನು ಭದ್ರಪಡಿಸಿಕೊಳ್ಳುವ ನಿರೀಕ್ಷೆಯಲ್ಲಿವೆ.
ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಷಟ್ಲರ್ ಹೆಚ್.ಎಸ್.ಪ್ರಣಯ್ ಅವರ ಅತ್ಯುತ್ತಮ ಪ್ರದರ್ಶನದಿಂದ ಭಾರತಕ್ಕೆ ಕಂಚಿನ ಪದಕ ಖಚಿತವಾಗಿದೆ. ಪುರುಷರ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಭಾರತದ ಪದಕ ಪಟ್ಟಿಗೆ ತಮ್ಮ ಕೊಡುಗೆ ನೀಡುವ ನಿರೀಕ್ಷೆಯಲ್ಲಿದ್ದಾರೆ.
ಬ್ರಿಡ್ಜ್: ಭಾರತದ ಪುರುಷರ ಬ್ರಿಡ್ಜ್ ತಂಡ ಕೂಡ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಫೈನಲ್‌ನಲ್ಲಿ ಹಾಂಕಾಂಗ್, ಚೀನಾ ವಿರುದ್ಧ ಪೈಪೋಟಿ ನಡೆಸಲಿದೆ. ಪ್ರಣಯ್ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಕೂಡ ಪದಕ ಗೆಲ್ಲುವ ಉದ್ದೇಶದಿಂದ ಏಷ್ಯನ್ ಗೇಮ್ಸ್ ಪ್ರವೇಶಿಸಲಿದ್ದಾರೆ.
ಕ್ರೀಡಾಕೂಟದಲ್ಲಿ ಭಾರತೀಯ ಸ್ಪರ್ಧಿಗಳು ಇದುವರೆಗೆ ಚಿನ್ನ, ಬೆಳ್ಳಿ ಮತ್ತು ಕಂಚು ಸೇರಿ ಒಟ್ಟು 85 ಪದಕಗಳನ್ನು ತಮ್ಮ ಬಗಲಿಗೆ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಪುರುಷ 'ಗುರಿ'ಕಾರರಿಗೆ ಚಿನ್ನ, ಇದೇ ಮೊದಲ ಬಾರಿಗೆ 21 ಬಂಗಾರದ ಪದಕ ಗೆದ್ದ ಭಾರತ