ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): 23 ಗ್ರ್ಯಾಂಡ್ ಸ್ಲಾಮ್ಗಳ ಒಡತಿ ಸೆರೆನಾ ವಿಲಿಯಮ್ಸ್ ತಾವಿನ್ನೂ ಟೆನಿಸ್‌ನಿಂದ ನಿವೃತ್ತಿಯಾಗಿಲ್ಲ ಎಂದು ಹೇಳಿದ್ದಾರೆ. ಟೆನಿಸ್ ಅಂಗಳಕ್ಕೆ ಮರಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಅಮೆರಿಕನ್ ಓಪನ್ ಟೂರ್ನಿ ಬಳಿಕ ಸೆರೆನಾ ವಿಲಿಯಮ್ಸ್ ಟೆನಿಸ್ ಅಂಗಣದಿಂದ ದೂರ ಸರಿಯುವುದಾಗಿ ಹೇಳಿದ್ದರು.
ಆದರೆ ಸೋಮವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಸಮಾರಂಭದಲ್ಲಿ "ನಾನು ನಿವೃತ್ತಿಯಾಗಿಲ್ಲ" ಎಂದು ಹೇಳಿದ್ದಾರೆ. ಟೆನಿಸ್ ಅಂಗಣಕ್ಕೆ ಹಿಂತಿರುಗವ ಸಾಧ್ಯತೆಗಳು ತುಂಬಾ ಹೆಚ್ಚಿವೆ ಎಂದಿದ್ದಾರೆ. ಈ ಮಾತಿಗೆ ಸಮರ್ಥನೆ ಎಂಬಂತೆ ನೀವು ನಮ್ಮ ಮನೆಗೆ ಬನ್ನಿ, ಮನೆಯಲ್ಲಿ ಟೆನಿಸ್ ಕೋರ್ಟ್ ಇದೆ ಎಂದು ಹೇಳಿದ್ದಾರೆ. ವಿಲಿಯಮ್ಸ್ ಆಗಸ್ಟ್ 9 ರಂದು ಟೆನಿಸ್‌ನಿಂದ ನಿವೃತ್ತಿ ಘೋಷಿಸಿದ್ದರು.
ನಿವೃತ್ತಿ ಎಂಬ ಪದವನ್ನು ನಾನು ಎಂದಿಗೂ ಇಷ್ಟಪಟ್ಟಿಲ್ಲ. ಇದು ನನಗೆ ಆಧುನಿಕ ಪದದಂತೆ ಭಾಸವಾಗುವುದಿಲ್ಲ. ನಾನು ಇದನ್ನು ಪರಿವರ್ತನೆ ಎಂದು ಭಾವಿಸುತ್ತೇನೆ. ಆದರೆ, ನಾನು ಆ ಪದವನ್ನು ಹೇಗೆ ಬಳಸುತ್ತೇನೆ ಎಂಬುದರ ಕುರಿತು ಸೂಕ್ಷ್ಮವಾಗಿರಲು ಬಯಸುತ್ತೇನೆ. ಅಂದರೆ ಬಹಳ ನಿರ್ದಿಷ್ಟವಾದ ವಿಷಯ ಮತ್ತು ಜನರ ಸಮುದಾಯಕ್ಕೆ ಇದು ಮುಖ್ಯವಾಗಿದೆ ಎಂದು ಸೆರೆನಾ ವೋಗ್ ಮ್ಯಾಗಜೀನ್‌ಗೆ ಬರೆದ ಲೇಖನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸೆರೆನಾ ವಿಲಿಯಮ್ಸ್ ಇದುವರೆಗೂ 23 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಪ್ರಸ್ತುತ ಟೆನಿಸ್ ಅಂಗಳದಲ್ಲಿರುವ ಇತರ ಆಟಾಗರರಿಗಿಂತ ವಿಲಿಯನ್ಸ್ ಅತಿ ಹೆಚ್ಚು ಗ್ರಾಂಡ್ಸ್ಲ್ಯಾಮ್ ಗೆದ್ದ ಆಟಗಾರ್ತಿಯಾಗಿದ್ದಾರೆ. ಮಾರ್ಗರೆಟ್ ಕೋರ್ಟ್ ಅವರು 24 ಗ್ರಾಂಡ್ಸ್ಲ್ಯಾಮ್ ಗೆದ್ದು ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನು ಓದಿ: ಆಸ್ಟ್ರೇಲಿಯಾದಲ್ಲಿ ನಡೆಯುವ ಎಟಿಪಿ ಕಪ್ನಿಂದ ಹಿಂದೆ ಸರಿದ ಜೋಕೊವಿಕ್