ನವದೆಹಲಿ: ಏಷ್ಯಾಕಪ್ ಆತಿಥ್ಯ ವಹಿಸುವ ರಾಷ್ಟ್ರದ ಕುರಿತ ಅಂತಿಮ ನಿರ್ಧಾರವನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ನಂತರ ತೆಗೆದುಕೊಳ್ಳಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ಮೇ 28ರಂದು ಗುಜರಾತ್ ಅಹಮದಾಬಾದ್ನಲ್ಲಿ ಐಪಿಎಲ್ ಫೈನಲ್ ಪಂದ್ಯ ಜರುಗಲಿದೆ. ಇದರಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ)ಯ ಪ್ರಮುಖರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಹೈಬ್ರಿಡ್ ಮಾದರಿಯಲ್ಲಿ ಏಷ್ಯಾ ಕಪ್: ಭಾರತ-ಪಾಕಿಸ್ತಾನ ಫೈನಲ್ನಲ್ಲಿ ಎದುರಾದರೆ ಪಂದ್ಯ ಎಲ್ಲಿ?
ಏಷ್ಯಾಕಪ್ ಆತಿಥ್ಯಕ್ಕೆ ಸಂಬಂಧಿಸಿದ ನಿರ್ಧಾರ ಇನ್ನೂ ಅಂತಿಮಗೊಳಿಸಲಾಗಿಲ್ಲ. ನಾವು ಸದ್ಯ ಐಪಿಎಲ್‌ನಲ್ಲಿ ನಿರತರಾಗಿದ್ದೇವೆ. ಆದರೆ, ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ), ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಉನ್ನತ ಗಣ್ಯರು ಐಪಿಎಲ್ ಫೈನಲ್ ವೀಕ್ಷಿಸಲು ಬರುತ್ತಿದ್ದಾರೆ. ಆಗ ನಾವು ಚರ್ಚೆ ನಡೆಸುತ್ತೇವೆ ಮತ್ತು ಸೂಕ್ತ ಸಮಯದಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಜಯ್ ಶಾ ಹೇಳಿದ್ದಾರೆ.
ಈ ವರ್ಷದ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನ ವಹಿಸಬೇಕಿದೆ. ಆದರೆ, ಭಾರತೀಯ ಕ್ರಿಕೆಟ್ ತಂಡವು ಕೇಂದ್ರ ಸರ್ಕಾರದ ಅನುಮತಿಯಿಲ್ಲದೇ ನೆರೆಯ ದೇಶಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದೆ. ಇದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ 'ಹೈಬ್ರಿಡ್ ಮಾದರಿ'ಯನ್ನು ಪ್ರಸ್ತಾಪಿಸಿದ್ದಾರೆ. ಅಂದರೆ, ಪಾಕಿಸ್ತಾನದಲ್ಲಿ ಇತರ ರಾಷ್ಟ್ರಗಳು ಪಂದ್ಯಗಳು ನಡೆದರೆ, ಭಾರತ ತಂಡ ತನ್ನ ಪಂದ್ಯಗಳು ಹೊರಗಡೆ ಆಡಲಿ ಎಂದು ಸೇಥಿ ತಿಳಿಸಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಬರುವುದಾಗಿ ಬರೆದುಕೊಟ್ಟರೆ ವಿಶ್ವಕಪ್ಗೆ ಪಾಕ್ ಭಾರತಕ್ಕೆ: ಪಿಸಿಬಿ ಚೌಕಾಸಿ
ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಅಫ್ಘಾನಿಸ್ತಾನ ತಂಡವು ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳನ್ನು ಆಡುವುದರೊಂದಿಗೆ ಭಾರತವು ತನ್ನ ಎಲ್ಲ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡುತ್ತದೆ ಎಂಬ ಪ್ರಸ್ತಾವವನ್ನು ಸೇಥಿ ಮುಂದಿಟ್ಟಿದ್ದಾರೆ. ಆದರೆ, ಹೈಬ್ರಿಡ್ ಮಾದರಿಯ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಇದೇ ವೇಳೆ ಭಾರತ ಮತ್ತು ಪಾಕಿಸ್ತಾನದ ಎರಡು ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸುವ ವಿಚಾರವೂ ಮುನ್ನಲೆಗೆ ಬಂದಿದೆ. ಆದರೆ, ಈ ಪಂದ್ಯಗಳನ್ನು ದುಬೈನಲ್ಲಿ ನಡೆಯಬೇಕು ಎಂದು ಪಾಕಿಸ್ತಾನ ಬಯಸುತ್ತದೆ ಎಂದು ತಿಳಿದು ಬಂದಿದೆ. ಆದರೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥರೂ ಆಗಿರುವ ಜಯ್ ಶಾ ಕಾರ್ಯಕಾರಿ ಮಂಡಳಿ ಸಭೆಯನ್ನು ಕರೆದು ಆತಿಥ್ಯ ವಹಿಸುವ ರಾಷ್ಟ್ರದ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.
ಸೆಪ್ಟೆಂಬರ್ 1ರಿಂದ 17ರ ನಡುವೆ ಏಷ್ಯಾಕಪ್ ಟೂರ್ನಿಗೆ ಅವಕಾಶವಿದೆ. ಇದೇ ವರ್ಷ ಅಕ್ಟೋಬರ್ 5ರಿಂದ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಮತ್ತೊಂದೆಡೆ, 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪಾಕಿಸ್ತಾನದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುವುದಾಗಿ ಬಿಸಿಸಿಐ ಲಿಖಿತವಾಗಿ ಒಪ್ಪಿಗೆ ನೀಡಿದರೆ, ಪಾಕಿಸ್ತಾನ ತಂಡ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತದೆ. ಇಲ್ಲವಾದಲ್ಲಿ ವಿಶ್ವಕಪ್ಗೂ ಹೈಬ್ರಿಡ್ ಮಾದರಿಯ ಬಗ್ಗೆ ಪ್ರಸ್ತಾಪಿಸಲು ಸೇಥಿ ಮುಂದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಐಪಿಎಲ್ ಫೈನಲ್ ನಂತರ ಏಷ್ಯಾಕಪ್ ಆತಿಥ್ಯ ವಹಿಸುವ ರಾಷ್ಟ್ರದ ಘೋಷಣೆ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಏಷ್ಯಾಕಪ್ ತಪ್ಪಿಸಿಕೊಂಡರೆ ಪಾಕಿಸ್ತಾನಕ್ಕೆ 3 ಮಿಲಿಯನ್ ಡಾಲರ್ ಆದಾಯ ನಷ್ಟ: ಪಿಸಿಬಿ ಅಧ್ಯಕ್ಷ