ಲಂಡನ್: ವಿಂಬಲ್ಡನ್ ಮಹಿಳಾ ಸಿಂಗಲ್ಸ್ನಲ್ಲಿ ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೊವಾ ಇತಿಹಾಸ ಸೃಷ್ಟಿಸಿದ್ದಾರೆ. ಶನಿವಾರ ನಡೆದ 2023ರ ವಿಂಬಲ್ಡನ್ ಫೈನಲ್‌ನಲ್ಲಿ ಟ್ಯುನಿಷಿಯಾದ ನಂ.6 ಶ್ರೇಯಾಂಕದ ಓನ್ಸ್ ಜಬೇರ್ ಅವರನ್ನು ಮಣಿಸಿ ವಿಂಬಲ್ಡನ್ ಕಿರೀಟವನ್ನು ವೊಂಡ್ರೊಸೊವಾ ಮುಡಿಗೇರಿಸಿಕೊಂಡಿದ್ದಾರೆ. ಇದು ಮಾರ್ಕೆಟಾ ವೊಂಡ್ರೊಸೊವಾ ಅವರಿಗೆ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಅಲ್ಲದೇ, ವಿಂಬಲ್ಡನ್ ಗೆದ್ದ ಕಡಿಮೆ ಶ್ರೇಯಾಂಕದ ಮತ್ತು ಮೊದಲ ಶ್ರೇಯಾಂಕ ರಹಿತ ಆಟಗಾರ್ತಿ ಎಂಬ ಹೆಗ್ಗಳಿಗೆ ವೊಂಡ್ರೊಸೊವಾ ಪಾತ್ರರಾಗಿದ್ದಾರೆ.
2022ರ ರನ್ನರ್ ಅಪ್ ಆಗಿರುವ ಓನ್ಸ್ ಜಬೇರ್ ಅವರನ್ನು 6-4, 6-4 ಸೆಟ್‌ಗಳಿಂದ ಸೋಲಿಸುವ ಮೂಲಕ ಮಾರ್ಕೆಟಾ ವೊಂಡ್ರೊಸೊವಾ ಈ ಅದ್ಭುತ ಸಾಧನೆ ಮಾಡಿದ್ದಾರೆ. ಜೆಕ್ ಗಣರಾಜ್ಯದ 24 ವರ್ಷದ ಈ ಎಡಗೈ ಆಟಗಾರ್ತಿ 42ನೇ ಶ್ರೇಯಾಂಕವನ್ನು ಹೊಂದಿದ್ದಾರೆ. 60 ವರ್ಷಗಳಲ್ಲಿ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಫೈನಲ್ ತಲುಪಿದ ಮೊದಲ ಶ್ರೇಯಾಂಕ ರಹಿತ ಆಟಗಾರ್ತಿಯಾಗಿದ್ದಾರೆ.
ವೊಂಡ್ರೊಸೊವಾ ಪ್ರತಿ ಸೆಟ್‌ನಲ್ಲಿ ಹಿಂದುಳಿದಿದ್ದರು. ಆದರೆ, ಮೊದಲನೆಯ ಕೊನೆಯ ನಾಲ್ಕು ಹಾಗೂ ನಂತರದ ಎರಡನೇಯ ಕೊನೆಯ ಮೂರು ಪಂದ್ಯಗಳಲ್ಲಿ ಮುಟ್ಟಿ ನಿಂತು ವಿಂಬಲ್ಡನ್ ಕಿರೀಟಕ್ಕೆ ಮುತ್ತಿಕ್ಕಿದರು. 2019ರ ಫ್ರೆಂಚ್ ಓಪನ್‌ನ ಫೈನಲ್‌ಗೆ ತಲುಪಿದ್ದ ವೊಂಡ್ರೊಸೊವಾ ಸೋತು ನಿರಾಸೆ ಅನುಭವಿಸಿದ್ದರು. ವೊಂಡ್ರೊಸೊವಾ ಗಾಯದ ಕಾರಣದಿಂದ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಆಟದಿಂದ ಹೊರಗುಳಿದಿದ್ದರು. 2022ರಲ್ಲಿ 99ನೇ ಶ್ರೇಯಾಂಕವನ್ನು ಹೊಂದಿದ್ದರು.
ಮತ್ತೊಂದೆಡೆ, 28 ವರ್ಷದ ಜಬೇರ್ ತಾನು ಆಡಿದ ಎಲ್ಲ ಮೂರು ಪ್ರಮುಖ ಫೈನಲ್‌ಗಳಲ್ಲಿ ಸೋತಿದ್ದಾರೆ. ಕಳೆದ ವರ್ಷದ ವಿಂಬಲ್ಡನ್ ಮತ್ತು ಯುಎಸ್ ಓಪನ್ ಫೈನಲ್‌ನಲ್ಲೂ ಜಬೇರ್ ಸೋಲು ಕಂಡಿದ್ದರು. ಇದೀಗ ವಿಂಬಲ್ಡನ್ ಮಹಿಳಾ ಸಿಂಗಲ್ಸ್ನಲ್ಲಿ ನಿರಾಸೆ ಅನುಭವಿಸಿದ್ದಾರೆ.
ಇದನ್ನೂ ಓದಿ: US Open: ಅಮೆರಿಕ ಓಪನ್ ಬ್ಯಾಡ್ಮಿಂಟನ್ ನಾಲ್ಕರಘಟ್ಟಕ್ಕೆ ಲಕ್ಷ್ಯ ಸೇನ್ ಲಗ್ಗೆ, ಸೋತು ಹೊರಬಿದ್ದ ಸಿಂಧು