ಮುಂಬೈ: ಹಾಲಿವುಡ್ ಚಿತ್ರದ 'ದಿ ಟರ್ಮಿನಲ್' ನಲ್ಲಿ ಟಾಮ್ ಹ್ಯಾಂಕ್ ಪಾತ್ರದಂತೆಯೇ 23 ವರ್ಷದ ಘಾನಾದ ಫುಟ್ಬಾಲ್ ಆಟಗಾರ ರ‍್ಯಾಂಡಿ ಜುವಾನ್ ಮುಲ್ಲರ್ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ 74 ದಿನಗಳ ಕಾಲ ಮುಂಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿ ಕಾಲ ಕಳೆದಿದ್ದಾರೆ.
ಶಿವಸೇನೆ ಪಕ್ಷದ ಯುವ ವಿಭಾಗವಾದ ಯುವಸೇನೆಯ ಸಹಾಯದಿಂದ ಮುಲ್ಲರ್ ಅವರು ಸ್ಥಳೀಯ ಹೋಟೆಲ್ಗೆ ಸ್ಥಳಾಂತರಗೊಂಡಿದ್ದಾರೆ. ವಿಮಾನಯಾನ ಪುನಾರಾರಂಭವಾದ ನಂತರ ಅವರು ತವರಿಗೆ ಮರಳಲಿದ್ದಾರೆ.
ಐಎಸ್ಎಲ್ನಲ್ಲಿ ಕೇರಳದ ಪರ ಆಡುವ ಮುಲ್ಲರ್, ತಮಗೆ ಸಹಾಯ ಮಾಡಿದ್ದಕ್ಕೆ ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಹಾಗೂ ಯುವ ಸೇನೆಯ ಅಧ್ಯಕ್ಷ ರಾಹುಲ್ ಕನಾಲ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಆದಿತ್ಯ ಠಾಕ್ರೆ, ರಾಹುಲ್ ಕನಾಲ್ ಅವರಿಗೆ ತುಂಬಾ ಧನ್ಯವಾದಗಳು. ನೀವು ಮಾಡಿದ ಸಹಾಯವನ್ನು ನಾನು ಪ್ರಶಂಸಿಸುತ್ತೇನೆ ಎಂದು ಮುಲ್ಲರ್ ಹೇಳಿದ್ದಾರೆ.
ಘಾನಾ ರಾಷ್ಟ್ರೀಯ ತಂಡದ ಆಟಗಾರನಾಗಿರುವ ಈತ, ಕೇರಳ ಮೂಲದ ಫುಟ್ಬಾಲ್ ಕ್ಲಬ್ನಲ್ಲಿ ಅಡುತ್ತಿದ್ದರು. ಅವರು ಕೀನ್ಯಾ ಏರ್ಲೈನ್ಸ್ ಮೂಲಕ ತವರಿಗೆ ತೆರಳಲು ನಿರ್ಧರಿಸಿದ್ದರು. ಆದರೆ ಕೊರೊನಾ ಲಾಕ್ಡೌನ್ ಘೋಷಣೆಯಾದ ಸಂದರ್ಭದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.
ಮುಲ್ಲರ್ ಮುಂಬೈ ವಿಮಾನ ನಿಲ್ದಾಣದಲ್ಲಿ ನೆಲೆಸಿದ್ದು ಸಣ್ಣಪುಟ್ಟ ಅಂಗಡಿಗಳಿಂದ ಆಹಾರ ಖರೀದಿಸಿ ನಿಲ್ದಾಣದ ಸಿಬ್ಬಂದಿಯೊಂದಿಗೆ ಸಮಯ ಕಳೆದಿದ್ದಾರೆ. ಇಲ್ಲಿನ ಸಿಬ್ಬಂದಿ ಅವರಿಗೆ ತುಂಬಾ ಸಹಾಯ ಮಾಡಿದ್ದಾರೆ ಎಂದು ಕನಾಲ್ ಹೇಳಿದ್ದಾರೆ.
ಈ ಫುಟ್ಬಾಲ್ ಆಟಗಾರನ ಅವ್ಯವಸ್ಥೆ ಕಂಡು ಅದನ್ನು ಟ್ವಿಟರ್ ಬಳಕೆದಾರನೊಬ್ಬ ಆದಿತ್ಯ ಠಾಕ್ರೆ ಗಮನಕ್ಕೆ ತಂದಿದ್ದರು. ನಂತರ ಕನಾಲ್ ಮುಲ್ಲರ್ ಅವರನ್ನು ಭೇಟಿ ಮಾಡಿ ಹೋಟೆಲ್ಗೆ ತಲುಪಲು ಸಹಾಯ ಮಾಡಿದ್ದಾರೆ.