ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಆರಂಭವಾಗಲಿದ್ದರೂ, ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಅದರಲ್ಲೂ ನಾಲ್ಕನೇ ಕ್ರಮಾಂಕದ ಆಟಗಾರ ಯಾರೆಂಬುದು ನಿರ್ಧಾರವಾಗಿಲ್ಲ. ಸದ್ಯ ಲಯದಲ್ಲಿರುವ ಇಶಾನ್ ಕಿಶನ್, ಶುಭ್ಮನ್ ಗಿಲ್ ಆರಂಭಿಕರಾಗಿ ಯಶಸ್ವಿಯಾಗಿದ್ದಾರೆ. ನಾಯಕ ರೋಹಿತ್ ಶರ್ಮಾ, ಗಾಯದಿಂದ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ತಂಡ ಸೇರ್ಪಡೆಯಾದರೆ ಆರಂಭಿಕ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಲಿದೆ.
ಈ ಎಲ್ಲ ಗೊಂದಲಕ್ಕೆ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು, ಉಪಾಯವೊಂದನ್ನು ಹುಡುಕಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಆಡುವ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಅವರನ್ನು ನಾಲ್ಕನೇ ಕ್ರಮಾಂಕಕ್ಕೆ ಆಡಿಸಬೇಕು. ಆಗ ಇನ್ನೊಬ್ಬರನ್ನು ಮೂರನೇ ಸ್ಥಾನದಲ್ಲಿ ಆಡಿಸಬಹುದು ಎಂದು ಸಲಹೆ ನೀಡಿದ್ದಾರೆ.
4 ರಲ್ಲಿ ವಿರಾಟ್ ಆಡಿಸಿ: ಕ್ರೀಡಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಾಸ್ತ್ರಿ ಅವರು, ನಾನು ಕೋಚ್ ಆಗಿದ್ದಾಗ 2019 ರ ವಿಶ್ವಕಪ್ ವೇಳೆ ವಿರಾಟ್ ಕೊಹ್ಲಿಯನ್ನು 4ನೇ ಕ್ರಮಾಂಕದಲ್ಲಿ ಆಡಿಸಬೇಕು ಎಂದು ಭಾವಿಸಿದ್ದೆ. ಆದರೆ, ಕೈಗೂಡಿರಲಿಲ್ಲ. ವಿರಾಟ್ ಪ್ರಸ್ತುತ ಕ್ರಿಕೆಟ್ನ ಬ್ಯಾಟಿಂಗ್ ಸ್ಟಾರ್. ಈ ವರ್ಷ ಅದ್ಭುತ ಲಯದಲ್ಲಿದ್ದಾರೆ. ತಂಡದ ಸಮತೋಲನಕ್ಕಾಗಿ ಅವರನ್ನು 4ನೇ ಸ್ಥಾನಕ್ಕೆ ಆಡಿಸಬಹುದು ಎಂದು ಹೇಳಿದ್ದಾರೆ.
ಇಶಾನ್ ಕಿಶನ್ ಆರಂಭಿಕನಾಗಿ ಬ್ಯಾಟಿಂಗ್ ಆರಂಭಿಸಬೇಕು. ವಿರಾಟ್, ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಹೊಸ ಸ್ಥಾನಗಳಿಗೆ ಹೊಂದಿಕೊಳ್ಳಬೇಕು. ವಿರಾಟ್ರನ್ನು ಮೂರರಿಂದ ನಾಲ್ಕನೇ ಸ್ಥಾನಕ್ಕೆ ಆಡಿಸಿದರೆ, ಮಧ್ಯಮ ಕ್ರಮಾಂಕಕ್ಕೆ ಅನುಭವ ಮತ್ತು ಬ್ಯಾಟಿಂಗ್ ಬಲ ಹೆಚ್ಚಲಿದೆ ಎಂದು ಶಾಸ್ತ್ರಿ ಹೇಳಿದರು.
ನಾಯಕ ರೋಹಿತ್ ಅನುಭವಿಯಾಗಿದ್ದು, ಅವರು ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಆಡಬಹುದು. ಗಿಲ್, ಕಿಶನ್ ಆರಂಭಿಕರಾಗಲಿ. ಆರಂಭಿಕನಾಗಿರುವ ಗಿಲ್ ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಆಡಿಸಲು ಕಷ್ಟಸಾಧ್ಯ. ಹೀಗಾಗಿ ಅನುಭವಿ ವಿರಾಟ್ರನ್ನೇ ನಾಲ್ಕನೇ ಸ್ಥಾನ ಆಡಿಸಬಹುದು. ಅವರು ಆ ಕ್ರಮಾಂಕದಲ್ಲೂ ಉತ್ತಮ ದಾಖಲೆ ಹೊಂದಿದ್ದಾರೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ದಾಖಲೆ ಹೇಗಿದೆ?: ವಿಶ್ವದ ಫ್ಯಾಬ್ 4 ಬ್ಯಾಟರ್ಗಳಲ್ಲಿ ಒಬ್ಬರಾದ ವಿರಾಟ್ 3 ಮತ್ತು 4ನೇ ಕ್ರಮಾಂಕದಲ್ಲಿ 50+ ಸರಾಸರಿ ರನ್ ದಾಖಲೆ ಹೊಂದಿದ್ದಾರೆ. 275 ಏಕದಿನ ಪಂದ್ಯಗಳಲ್ಲಿ 57.32 ರ ಸರಾಸರಿಯಲ್ಲಿ 12,898 ರನ್‌ಗಳನ್ನು ಗಳಿಸಿದ್ದಾರೆ. 46 ಶತಕ ಮತ್ತು 65 ಅರ್ಧ ಶತಕ ಬಾರಿಸಿದ್ದಾರೆ.
ಹಲವು ವರ್ಷಗಳಿಂದ ಮೂರನೇ ಸ್ಥಾನದಲ್ಲಿ ಆಡುತ್ತಿರುವ ವಿರಾಟ್ 210 ಇನ್ನಿಂಗ್ಸ್‌ಗಳಲ್ಲಿ 60.20 ಸರಾಸರಿಯಲ್ಲಿ 39 ಶತಕ ಮತ್ತು 55 ಅರ್ಧಶತಕಗಳೊಂದಿಗೆ 10,777 ರನ್ ದಾಖಲಿಸಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಆಡಿದ 39 ಇನ್ನಿಂಗ್ಸ್‌ಗಳಲ್ಲಿ 55.21 ಸರಾಸರಿಯಲ್ಲಿ 7 ಶತಕ ಮತ್ತು 8 ಅರ್ಧಶತಕಗಳೊಂದಿಗೆ 1,767 ರನ್ ಗಳಿಸಿದ್ದಾರೆ.
ಓದಿ: ಏಷ್ಯಾಕಪ್ - 2023: ಶ್ರೀಲಂಕಾ ಚರಣದ ಟಿಕೆಟ್ ಮಾರಾಟ ಇಂದಿನಿಂದ ಶುರು; ಭಾರತ -ಪಾಕಿಸ್ತಾನ ಪಂದ್ಯದ ಟಿಕೆಟ್ ಲಭ್ಯ