ದುಬೈ(ಯುಎಇ): ಕಳೆದ ಮೂರು ವರ್ಷಗಳಿಂದ ಕಳಪೆ ಬ್ಯಾಟಿಂಗ್ನಿಂದ ಸಂಕಷ್ಟಕ್ಕೊಳಗಾಗಿದ್ದ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಏಷ್ಯಾ ಕಪ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. ನಿನ್ನೆ ಪಾಕ್ ವಿರುದ್ಧ ದುಬೈನಲ್ಲಿ ನಡೆದ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ 60 ರನ್ಗಳಿಸಿ ಅವರು ಮಿಂಚಿದರು. ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಮಹತ್ವದ ವಿಚಾರವೊಂದನ್ನು ಹೊರಹಾಕಿದರು.
2022ರಲ್ಲಿ ನಾನು ಟೆಸ್ಟ್ ನಾಯಕತ್ವ ತೊರೆದ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ ಮಾತ್ರವೇ ವೈಯಕ್ತಿಕವಾಗಿ ಸಂದೇಶ ಕಳುಹಿಸಿದ್ದರು. ಉಳಿದಂತೆ ಬೇರಾರೂ ನನ್ನೊಂದಿಗೆ ಮಾತನಾಡಲಿಲ್ಲ ಹಾಗೂ ಸಂದೇಶ ಸಹ ಕಳುಹಿಸಿಲ್ಲ ಎಂದರು. ವೃತ್ತಿ ಜೀವನದಲ್ಲಿ ಕಳೆದ 8-12 ತಿಂಗಳ ಹಾದಿ ನಿಮಗೆ ಕಠಿಣವಾಗಿತ್ತು. ಈ ವೇಳೆ ಯಾರಾದ್ರೂ ನಿಮ್ಮ ಬೆಂಬಲಕ್ಕೆ ಬಂದಿದ್ದರೇ? ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ವಿರಾಟ್ ಈ ರೀತಿ ಪ್ರತಿಕ್ರಿಯಿಸಿದರು.
"ನಾನು ಟೆಸ್ಟ್ ನಾಯಕತ್ವ ತೊರೆದಾಗ ಈ ಹಿಂದೆ ನನ್ನೊಂದಿಗೆ ಆಡಿದ ಒಬ್ಬ ವ್ಯಕ್ತಿಯಿಂದ ಮಾತ್ರ ನನಗೆ ಸಂದೇಶ ಬಂದಿತ್ತು. ಅದು ಎಂ.ಎಸ್.ಧೋನಿ. ಬಹಳಷ್ಟು ಜನರ ಮೊಬೈಲ್ ಸಂಖ್ಯೆ ನನ್ನ ಬಳಿ ಇದೆ. ಬಹಳಷ್ಟು ಜನರು ನನಗೆ ಸಲಹೆ ನೀಡುತ್ತಾರೆ. ಸಾಕಷ್ಟು ಮಂದಿ ಟಿವಿಯಲ್ಲಿ ನನ್ನ ಆಟದ ಬಗ್ಗೆ ಮಾತನಾಡುತ್ತಾರೆ. ಆದರೆ, ನನ್ನ ಫೋನ್ ನಂಬರ್ ಹೊಂದಿರುವವರಲ್ಲಿ ಧೋನಿಯನ್ನು ಹೊರತುಪಡಿಸಿ ಅಂದು ಬೇರೆ ಯಾರಿಂದಲೂ ನನಗೆ ಸಂದೇಶ ಬಂದಿರಲಿಲ್ಲ" ಎಂದು ಕೊಹ್ಲಿ ಹೇಳಿದರು. "ನನಗೆ ಎಲ್ಲರ ಬಗ್ಗೆಯೂ ಗೌರವವಿದೆ. ಕೆಲವು ಜನರೊಂದಿಗೆ ನಾನು ಸಂಪರ್ಕ ಹೊಂದಿದ್ದೇನೆ. ಆದರೆ, ಅವರಿಂದ ನಾನೇನನ್ನೂ ಬಯಸುವುದಿಲ್ಲ. ನನ್ನಿಂದ ಅವರಿಗೂ ಏನೂ ಸಿಗಲ್ಲ" ಎಂದರು.
ಇದನ್ನೂ ಓದಿ: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಪಾಕ್: ಸೋತ ಪಂದ್ಯದಲ್ಲೂ ವಿಶ್ವದಾಖಲೆ ಬರೆದ ಕೊಹ್ಲಿ
ಸತತವಾಗಿ ರನ್ ಬರ ಎದುರಿಸುತ್ತಿದ್ದ ಕೊಹ್ಲಿ ಕಳೆದ ವರ್ಷ ಟಿ20 ವಿಶ್ವಕಪ್ ಬಳಿಕ ಟಿ20 ನಾಯಕತ್ವ ತ್ಯಜಿಸಿದ್ದರು. ಇದಾದ ಬಳಿಕ ಅವರನ್ನು ಏಕದಿನ ನಾಯಕತ್ವದಿಂದಲೂ ಕೆಳಗಿಳಿಸಿ ರೋಹಿತ್ ಶರ್ಮಾ ಅವರಿಗೆ ಆ ಹೊಣೆ ನೀಡಲಾಗಿತ್ತು. ಜೊತೆಗೆ, ODI ಮತ್ತು T20 ಮಾದರಿಗೆ ಇಬ್ಬರು ನಾಯಕರು ಇರುವುದು ಸರಿಯಲ್ಲ ಎಂಬ ಮಾತೂ ಸಹ ಕೇಳಿ ಬಂದಿತ್ತು. 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 2-1 ಅಂತರದಿಂದ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ವಿರಾಟ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಟೆಸ್ಟ್ ನಾಯಕತ್ವದಿಂದಲೂ ಹೊರಬಂದಿದ್ದರು.
"ನಾನು ಯಾರಿಗಾದ್ರೂ ಆಟದ ಬಗ್ಗೆ ಹೇಳಬೇಕಾದರೆ ಪ್ರತ್ಯೇಕವಾಗಿ ಅವರ ಬಳಿ ಹೋಗುತ್ತೇನೆ. ಯಾರಿಂದಾದರೂ ಸಲಹೆ ಪಡೆಯಬೇಕಾದ್ರೂ ಹಾಗೆಯೇ ಮಾಡುವೆ. ಆದರೆ, ಕೆಲವರು ಇಡೀ ಪ್ರಪಂಚದ ಮುಂದೆ ಸಲಹೆ ನೀಡುತ್ತಾರೆ. ಅದರಿಂದ ನನಗೆ ಹೆಚ್ಚಿನ ಪ್ರಯೋಜನವಾಗಲ್ಲ. ನನಗೆ ಏನಾದ್ರೂ ಸಲಹೆ ನೀಡಬೇಕಾದರೆ ನನ್ನೊಂದಿಗೆ ಮಾತನಾಡಬಹುದು. ಅದನ್ನು ಪ್ರಾಮಾಣಿಕವಾಗಿ ಪಡೆದುಕೊಳ್ಳುತ್ತೇನೆ. ನಾನು ತುಂಬಾ ಪ್ರಾಮಾಣಿಕವಾಗಿ ಜೀವನ ನಡೆಸುವ ವ್ಯಕ್ತಿ. ಇಷ್ಟು ದಿನ ಕ್ರಿಕೆಟ್ ಅನ್ನು ಪ್ರಾಮಾಣಿಕವಾಗಿಯೇ ಆಡಿದ್ದೇನೆ" ಎಂದು ವಿವರಿಸಿದರು.
ಏಷ್ಯಾ ಕಪ್ಗೂ ಮುನ್ನ ಧೋನಿ ಸ್ಮರಿಸಿದ್ದ ಕೊಹ್ಲಿ: ಏಷ್ಯಾ ಕಪ್ ಟಿ20 ಟೂರ್ನಿ ಆರಂಭಗೊಳ್ಳಲು ಕೇವಲ ಒಂದೇ ದಿನ ಬಾಕಿ ಇರುವಾಗ ಧೋನಿ ನೆನೆದು ವಿರಾಟ್ ಟ್ವೀಟ್ ಮಾಡಿದ್ದರು."7+18" ಎಂದು ಬರೆದುಕೊಂಡಿದ್ದ ಅವರು, ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಆಡಿರುವುದು ನನ್ನ ಜೀವನದಲ್ಲೇ ಅತ್ಯಂತ ಸ್ಮರಣೀಯ ಕ್ಷಣ ಎಂದು ಖುಷಿ ಹಂಚಿಕೊಂಡಿದ್ದರು. "ಈ ವ್ಯಕ್ತಿಯ ವಿಶ್ವಾಸಾರ್ಹ ಉಪನಾಯಕನಾಗಿರುವುದು ನನ್ನ ವೃತ್ತಿಜೀವನದಲ್ಲಿ ಅತ್ಯಂತ ಆನಂದದಾಯಕವಾದ ಅವಧಿ. ನಮ್ಮ ಪಾಲುದಾರಿಕೆ ಎಂದೆಂದಿಗೂ ವಿಶೇಷವಾಗಿರುತ್ತದೆ ಎನ್ನುತ್ತಾ "7+18" ಎಂದು ಬರೆದುಕೊಂಡಿದ್ದರು. ಧೋನಿ ಅವರು ಧರಿಸುವ ಜರ್ಸಿ ನಂಬರ್ 7 ಹಾಗೂ ಕೊಹ್ಲಿ ಅವರದ್ದು 18 ಆಗಿದೆ. ಇದನ್ನು ಕೂಡಿಸಿದಾಗ 25 ಬರುತ್ತದೆ. ಆಗಸ್ಟ್ 25ಕ್ಕೆ ಕೊಹ್ಲಿ ಈ ಪೋಸ್ಟ್ ಮಾಡಿದ್ದರು.
2014ರಲ್ಲಿ ಟೆಸ್ಟ್ ಹಾಗೂ 2017ರಲ್ಲಿ ಏಕದಿನ ಹಾಗೂ ಟಿ20 ನಾಯಕತ್ವಕ್ಕೆ ಧೋನಿ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಅವರ ಉತ್ತರಾಧಿಕಾರಿಯಾಗಿ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದರು.