ಹೈದರಾಬಾದ್: ಐಪಿಎಲ್ ತಂಡವಾದ ರಾಯಲ್ ಚಾಲೆಂಜರ್ಸ್ಗೆ ಕರ್ನಾಟಕ ಮಾತ್ರವಲ್ಲ ಪರರಾಜ್ಯಗಳಲ್ಲೂ ಅಭಿಮಾನಿಗಳ ಬಳಗವೇ ಇದೆ. ತಮಿಳುನಾಡಿನಲ್ಲೂ ಇದಕ್ಕೆ ಕೊರತೆಯಿಲ್ಲ. ಆದರೆ, ಈ ಅಭಿಮಾನ ಓರ್ವನ ಕೊಲೆಗೆ ಕಾರಣವಾಗಿರುವುದು ಖೇದಕರ ಸಂಗತಿಯಾಗಿದೆ.
ಜಂಟಲ್‌ಮ್ಯಾನ್ ಗೇಮ್ ಕ್ರಿಕೆಟ್ ಎಂಬುದು ಸರ್ವವಿಧಿತ. ಆದರೆ, ಈ ಮಾತಿಗೆ ತದ್ವಿರುದ್ಧ ಘಟನೆ ತಮಿಳುನಾಡಲ್ಲಿ ನಡೆದಿದೆ. ರಾಯಲ್ ಚಾಲೆಂಜರ್ಸ್ ತಂಡ ಮತ್ತು ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ್ದಕ್ಕೆ ಕೊಹ್ಲಿ ಅಭಿಮಾನಿಯೊಬ್ಬ ರೋಹಿತ್ ಶರ್ಮಾ ಅಭಿಮಾನಿಯೊಬ್ಬನ ತಲೆಗೆ ಬ್ಯಾಟ್‌ನಿಂದ ಹೊಡೆದು ಸಾಯಿಸಿದ ದುರಂತ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 21 ವರ್ಷದ ಯುವಕನನ್ನು ಬಂಧಿಸಲಾಗಿದೆ.
ಅಕ್ಟೋಬರ್ 13 ರಂದು ತಮಿಳುನಾಡಿನ ಅರಿಯಲೂರು ಜಿಲ್ಲೆಯ ಪೊಯೂರ್ ಗ್ರಾಮದ ಇಬ್ಬರು ಸ್ನೇಹಿತರರಾದ ವಿಘ್ನೇಶ್ ಮತ್ತು ಧರ್ಮರಾಜ್ ಮದ್ಯದ ಅಮಲಿನಲ್ಲಿ ಕ್ರಿಕೆಟ್ ಕುರಿತಾಗಿ ವಾಗ್ವಾದ ಮಾಡಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ಅಭಿಮಾನಿಯಾಗಿದ್ದ ವಿಘ್ನೇಶ್, ಆರ್ಸಿಬಿ ತಂಡ ಮತ್ತು ವಿರಾಟ್ ಕೊಹ್ಲಿಯನ್ನು ಗೇಲಿ ಮಾಡಿದ್ದಾನೆ. ಇದರಿಂದ ಕೋಪಗೊಂಡ ಕೊಹ್ಲಿ ಅಭಿಯಾನಿಯಾಗಿದ್ದ ಧರ್ಮರಾಜ್ ಮದ್ಯದ ಬಾಟಲಿ ಮತ್ತು ಕ್ರಿಕೆಟ್ ಬ್ಯಾಟ್‌ನಿಂದ ವಿಘ್ನೇಶ್ ತಲೆಗೆ ಹೊಡೆದಿದ್ದಾನೆ.
ಇದರಿಂದ ಗಂಭೀರ ಗಾಯಗೊಂಡ ವಿಘ್ನೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಆರೋಪಿ ಧರ್ಮರಾಜ್ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರ್ಖಾನೆಯ ಮುಂದೆ ಶವ ಕಂಡ ಕಾರ್ಮಿಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.
ಯಾರು ಬೆಸ್ಟ್ ಎಂಬ ಕಿತ್ತಾಟ: ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ರೋಹಿತ್ ಮತ್ತು ವಿರಾಟ್ ಮೇಲಿನ ಅಭಿಮಾನಕ್ಕಾಗಿ ಈ ಕೊಲೆ ನಡೆದಿದೆ ಎಂಬುದು ತಿಳಿದುಬಂದಿದೆ. ಧರ್ಮರಾಜ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವಿರಾಟ್ ಕೊಹ್ಲಿಗಿಂತ, ರೋಹಿತ್ ಬೆಸ್ಟ್ ಎಂದು ಕ್ಯಾತೆ ತೆಗೆದ ಕಾರಣ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ದುರ್ಮರಣ ಹೊಂದಿದ ಪಿ.ವಿಘ್ನೇಶ್ ಐಟಿಐ ಪಾಸಾಗಿದ್ದು, ಸಿಂಗಾಪುರಕ್ಕೆ ತೆರಳಲು ಉದ್ಯೋಗ ವೀಸಾಗಾಗಿ ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಹ್ಲಿ ಬಂಧಿಸಲು ಟ್ವಿಟ್ಟರ್ ಟ್ರೆಂಡ್: ಇನ್ನು, ವಿರಾಟ್ ಕೊಹ್ಲಿಯ ಅಭಿಯಾನಿ ಕೊಲೆ ಮಾಡಿದ್ದಕ್ಕೆ ಬ್ಯಾಟಿಂಗ್ ಕಿಂಗ್ರನ್ನು ಬಂಧಿಸಬೇಕು ಎಂದು ರೋಹಿತ್ ಶರ್ಮಾ ಅಭಿಮಾನಿಗಳು ಟ್ವಿಟ್ಟರ್ನಲ್ಲಿ #Arrest Kohli ಎಂಬ ಹ್ಯಾಷ್ಟ್ಯಾಗ್ ಮೂಲಕ ಒತ್ತಾಯಿಸಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ಆಗಿತ್ತು.
ಓದಿ: ನಾಳೆಯಿಂದ ವಿಶ್ವಕಪ್ ಮಹಾಸಮರ.. 15 ವರ್ಷಗಳ ಬಳಿಕ ಭಾರತಕ್ಕೆ ಒಲಿಯುತ್ತಾ ಕಿರೀಟ