ದೇಶದಲ್ಲೀಗ 75 ನೇ ಸ್ವಾತಂತ್ರ್ಯ ಮಹೋತ್ಸವದ ಅಮೃತ ಗಳಿಗೆ. ಕ್ರಿಕೆಟ್ ರಂಗ ಈ ಹಿಂದಿನ ಹಲವು ವರ್ಷಗಳಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಅದರಲ್ಲೂ ಟಿ20 ಕ್ರಿಕೆಟ್ ಪರಿಚಯವಾದ ಬಳಿಕ ಅದನ್ನು ಇನ್ನಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದ್ದು ಭಾರತ ಕ್ರಿಕೆಟ್ ಎಂದೇ ಹೇಳಬೇಕು. 2007 ರಲ್ಲಿ ಐಸಿಸಿಯ ಚೊಚ್ಚಲ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಬಳಿಕ ನಡೆದ 7 ಚರಣಗಳಲ್ಲಿ ಭಾರತ ಮತ್ತೆ ಪ್ರಶಸ್ತಿ ಜಯಿಸುವಲ್ಲಿ ಸಫಲವಾಗಿಲ್ಲ.
2014 ರಲ್ಲಿ ಶ್ರೀಲಂಕಾ ವಿರುದ್ಧ ಸೋತು ರನ್ನರ್ ಅಪ್ ಆಗಿದ್ದೇ ಬಳಿಕದ ಸಾಧನೆಯಾಗಿದೆ. ಚುಟುಕು ಕ್ರಿಕೆಟ್ಗೆ ಹೊಸ ಆಯಾಮ ಹಾಕಿಕೊಟ್ಟ ಐಪಿಎಲ್ ಎಂಬ ದೈತ್ಯ ಟೂರ್ನಿಯನ್ನು ಪರಿಚಯಿಸಿದ ಭಾರತಕ್ಕೆ ಅದೇ ಫಾರ್ಮೆಟ್ನ ವಿಶ್ವಕಪ್ ಕಿರೀಟ ಮತ್ತೆ ಗೆಲ್ಲುವ ಭಾಗ್ಯ ಬಂದಿಲ್ಲ.
ದೇಶವೀಗ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿದೆ. ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಚುಟುಕು ಕ್ರಿಕೆಟ್ನ 8 ನೇ ವಿಶ್ವಕಪ್ ನಡೆಯಲಿದೆ. ಆಟಗಾರರು ಪ್ರಶಸ್ತಿ ಜಯಿಸಿ ಸ್ವಾತಂತ್ರ್ಯ ಸಂಭ್ರಮವನ್ನು ದ್ವಿಗುಣಗೊಳಿಸಲಿದ್ದಾರಾ ಎಂಬುದು ಅಭಿಮಾನಿಗಳ ನಿರೀಕ್ಷೆ.
ವಿಶ್ವಕಪ್ನಲ್ಲಿ ಭಾರತದ ಏಳುಬೀಳಿನ ಹಾದಿ..
2007- ಚಾಂಪಿಯನ್: ಮಾಜಿ ನಾಯಕ ಎಂ ಎಸ್ ಧೋನಿ ನೇತೃತ್ವದಲ್ಲಿ ಚೊಚ್ಚಲ ಚುಟುಕು ವಿಶ್ವಕಪ್ನಲ್ಲಿ ಭಾಗವಹಿಸಿದ ಭಾರತ ಪ್ರಶಸ್ತಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಕೂಟದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 2 ಬಾರಿ ಸೋಲಿಸಿದ್ದಲ್ಲದೇ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಪ್ರಿಕಾದಂತಹ ತಂಡಗಳನ್ನು ಸದೆಬಡಿದಿತ್ತು. ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಮಣಿದಿತ್ತು.
2009- ಸೂಪರ್-8 ಹಂತದಲ್ಲೇ ನಿರ್ಗಮನ: 2 ವರ್ಷದ ಬಳಿಕ ನಡೆದ 2ನೇ ಚರಣದಲ್ಲಿ ಭಾರತಕ್ಕೆ ಆಘಾತ ಕಾದಿತ್ತು. ಮೊದಲೆರಡು ಪಂದ್ಯಗಳಲ್ಲಿ ಬಾಂಗ್ಲಾದೇಶ, ಐರ್ಲೆಂಡ್ ವಿರುದ್ಧ ಜಯಿಸಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ವಿರುದ್ಧ ಸೋಲುವ ಮೂಲಕ ಸೂಪರ್ -8 ಹಂತದಲ್ಲೇ ಟೂರ್ನಿಯಲ್ಲಿ ಹೊರಬಿದ್ದಿತ್ತು. ಇದು ಚೊಚ್ಚಲ ವಿಶ್ವಕಪ್ ಚಾಂಪಿಯನ್ನರಿಗೆ ಮೊದಲ ಹಿನ್ನಡೆಯಾಗಿತ್ತು.
2010- ಮತ್ತದೇ ಶಾಕ್: ಮರು ವರ್ಷವೇ ನಡೆದ ಚುಟಕು ವಿಶ್ವಕಪ್ನಲ್ಲಿ ಭಾರತ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ರೋಹಿತ್,ರೈನಾ, ಜಡೇಜಾರಂತಹ ಸ್ಪೆಷಲಿಸ್ಟ್ಗಳನ್ನು ಹೊಂದಿದ್ದರೂ ನಿರಾಸೆ ಮಾತ್ರ ಕಳಚಲಿಲ್ಲ. ಆಫ್ಘಾನಿಸ್ತಾನ, ದಕ್ಷಿಣಾ ಆಫ್ರಿಕಾ ವಿರುದ್ಧ ಮೊದಲೆರೆಡು ಪಂದ್ಯ ಗೆದ್ದು, ಶ್ರೀಲಂಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ವಿರುದ್ಧ ಸೋತು ಮತ್ತೆ ಸೂಪರ್-8 ಹಂತದಲ್ಲಿ ನಿರ್ಗಮಿಸಿತು. ಕೆರೆಬಿಯನ್ನರ ನಾಡಿನಲ್ಲಿ ನಡೆದ ಟೂರ್ನಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಇಂಗ್ಲೆಂಡ್ ಮೊದಲ ಬಾರಿಗೆ ಚಾಂಪಿಯನ್ ಆಯಿತು.
2012- ಕಳಚದ ಸೂಪರ್ -8 ಸಂಕೋಲೆ: ಶ್ರೀಲಂಕಾದಲ್ಲಿ ನಡೆದ ಈ ಚರಣದಲ್ಲಿ ಭಾರತ ಉತ್ತಮ ಆರಂಭವೇ ಪಡೆಯಿತು. ಅಫ್ಘಾನಿಸ್ತಾನ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿತ್ತು. ಆದರೆ, ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ನೆಟ್ರನ್ರೇಟ್ ಅಂತರದಲ್ಲಿ ಆಸ್ಟ್ರೇಲಿಯಾ ಮುಂದಿದ್ದರಿಂದ ಭಾರತ ಸೆಮಿಫೈನಲ್ ರೇಸ್ನಿಂದ ಹೊರಬಿತ್ತು.
2014- ರನ್ನರ್ ಅಪ್ಗೆ ತೃಪ್ತಿ: ಭಾರತದ ಆಟಗಾರರ ಪರಾಕ್ರಮ ಈ ವಿಶ್ವಕಪ್ ಚರಣದಲ್ಲಿ ಕಂಡುಬಂತು. ಟೂರ್ನಿಯಲ್ಲಿ ಭಾರತ ತಾನಾಡಿದ ಎಲ್ಲ ಪಂದ್ಯಗಳಲ್ಲಿ ಅಜೇಯವಾಗಿ ಮುಂದುವರಿದು ಫೈನಲ್ನಲ್ಲಿ ಶ್ರೀಲಂಕಾ ಎದುರು ಮುಗ್ಗರಿಸಿ ಮತ್ತೆ ಟ್ರೋಫಿ ಎತ್ತಿಹಿಡಿಯುವ ಕನಸು ಭಗ್ನಗೊಂಡಿತು. ಇದಕ್ಕೂ ಮೊದಲು ಪ್ರಬಲ ತಂಡಗಳಾದ ಪಾಕಿಸ್ತಾನ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳಿಗೆ ಸೋಲಿನ ರುಚಿ ತೋರಿಸಿತ್ತು.
2016 - ಸೆಮಿಫೈನಲ್ ಸೋಲು: ವಿಶ್ವಕಪ್ ಗೆಲ್ಲುವ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ, ಈ ಬಾರಿ ಟ್ರೋಫಿ ಎತ್ತಲಿದೆ ಎಂದು ಕ್ರಿಕೆಟ್ ಜಗತ್ತು ಭಾವಿಸಿತ್ತು. ಇದಕ್ಕೆ ಕಾರಣ ಕ್ರಿಕೆಟ್ನ ಎಲ್ಲ ಮಾದರಿಯಲ್ಲಿ ಉತ್ತುಂಗದಲ್ಲಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂ.ಎಸ್.ದೋನಿ, ಬೌಲಿಂಗ್ ಪಡೆಯ ಹೊಸ ಹುರಿಯಾಳುಗಳಾದ ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಅವರಂತಹ ಆಟಗಾರರು ಅದ್ಭುತ ಲಯದಲ್ಲಿದ್ದರು. ಅಲ್ಲದೇ, ವಿಶ್ವಕಪ್ ಭಾರತದಲ್ಲಿ ನಡೆದಿತ್ತು. ತವರಿನಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ನರಾಗಿದ್ದ ವೆಸ್ಟ್ ಇಂಡೀಸ್ ವಿರುದ್ಧ ಮುಗ್ಗರಿಸಿತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 192 ರನ್ಗಳ ಬೃಹತ್ ಮೊತ್ತ ಗಳಿಸಿದಾಗ್ಯೂ ವಿಂಡೀಸ್ ದೈತ್ಯರ ಮುಂದೆ ಸೋಲು ಕಂಡರು.
2021- ಪಾಕ್ ಎದುರು ಸೋಲು: ಕೊರೊನಾ ಕಾರಣಕ್ಕಾಗಿ ಮುಂದೂಡಲಾಗಿದ್ದ ವಿಶ್ವಕಪ್ ಕೊನೆಗೂ 5 ವರ್ಷಗಳ ಬಳಿಕ ಯುಎಇಯಲ್ಲಿ ಆಯೋಜಿಸಲಾಗಿತ್ತು. ಸೂಪರ್ 8 ರ ಬದಲಾಗಿ 12 ತಂಡಗಳೊಂದಿಗೆ ಸೆಣಸಾಡಿದ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ತಾನಾಡಿದ ಮೊದಲ ಪಂದ್ಯದಲ್ಲೇ ಎದುರಾಳಿ ಪಾಕಿಸ್ತಾನದ ವಿರುದ್ಧ ಇತಿಹಾಸದಲ್ಲಿಯೇ ಮೊದಲ ಸೋಲು ಅನುಭವಿಸಿತು. ಇದು ಭಾರತಕ್ಕೆ ಇನ್ನಿಲ್ಲದ ಹೊರೆಯಾಗಿ ಪರಿಣಮಿಸಿತು.
ಬಳಿಕ ಗೆಲ್ಲಲೇಬೇಕಾದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋಲುವ ಮೂಲಕ ಸೂಪರ್ 12 ಹಂತದಲ್ಲಿ ಭಾರತ ವಿಶ್ವಕಪ್ನಿಂದ ಹೊರಬಿತ್ತು. ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತು.
ಇದನ್ನೂ ಓದಿ: IPL ತಂಡದ ಮಾಲೀಕರಿಂದ ಮೂರ್ನಾಲ್ಕು ಸಲ ಕಪಾಳಮೋಕ್ಷ.. ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಾಸ್ ಟೇಲರ್