ಹೈದರಾಬಾದ್:ಕ್ರಿಕೆಟ್ ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 2022ರ ಆವೃತ್ತಿಯ ಟೈಟಲ್ ಪ್ರಾಯೋಜಕತ್ವವನ್ನು ಭಾರತದ ದಿಗ್ಗಜ ಸಮೂಹ ಸಂಸ್ಥೆಯಾದ ಟಾಟಾ ಗ್ರೂಪ್ ಪಡೆದುಕೊಂಡಿದೆ. ಇಲ್ಲಿಯವರೆಗೆ ಚೀನಾದ ಮೊಬೈಲ್ ಉತ್ಪಾದನಾ ಕಂಪನಿ ವಿವೋ ಐಪಿಎಲ್ನ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡಿತ್ತು.
ಟಾಟಾ ಗ್ರೂಪ್ಗೆ ಮುಂದಿನ ವರ್ಷದ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ನೀಡಲಾಗಿದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಪಿಟಿಐಗೆ ತಿಳಿಸಿದ್ದಾರೆ. ಹಾಗಾಗಿ, ಇಲ್ಲಿಯವರೆಗೆ ವಿವೋ ಐಪಿಎಲ್ ಎಂದು ಕರೆಯಲ್ಪಡುತ್ತಿದ್ದ ನಗದು ಸಮೃದ್ಧ ಲೀಗ್ ಇನ್ಮುಂದೆ ಟಾಟಾ ಐಪಿಎಲ್ ಎಂದಾಗಲಿದೆ.
ವಿವೋ 2018ರಿಂದ 2022ರ ವರೆಗೆ ವರ್ಷಕ್ಕೆ 440 ಕೋಟಿ ರೂ.ಗಳಂತೆ 5 ವರ್ಷಗಳ ಅವಧಿಗೆ 2200 ಕೋಟಿ ರೂಗಳ ಶೀರ್ಷಿಕೆ ಪ್ರಾಯೋಕತ್ವ ಪಡೆದುಕೊಂಡಿತ್ತು. ಆದರೆ, 2020ರಲ್ಲಿ ಗಲ್ವಾನ್ ಗಡಿ ವಿವಾದ ಉಂಟಾಗಿದ್ದರಿಂದ ಆ ವರ್ಷ ಬಿಸಿಸಿಐ ವಿವೋ ಅನ್ನು ಟೈಟಲ್ ಪ್ರಾಯೋಜಕತ್ವದಿಂದ ಅಮಾನತುಗೊಳಿಸಿತ್ತು. 2020ರಲ್ಲಿ ಡ್ರೀಮ್ ಇಲೆವೆನ್ 222 ಕೋಟಿ ರೂ ನೀಡಿ ಟೈಟಲ್ ಪ್ರಯೋಜಕತ್ವ ಪಡೆದುಕೊಂಡಿತ್ತು. ಮತ್ತೆ 2021ರ ಆವೃತ್ತಿಯಲ್ಲಿ ಐಪಿಎಲ್ಗೆ ಮರಳಿದ್ದ ವಿವೋ 2023ರವರೆಗೆ ಹಕ್ಕನ್ನು ಹೊಂದಿತ್ತಾದರೂ, ಬಿಸಿಸಿಐ ಹಾಗೂ ವಿವೋ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪ್ರಾಯೋಜಕತ್ವ ಬದಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಒಪ್ಪಂದವನ್ನು ಟಾಟಾಗೆ ವರ್ಗಾಯಿಸಲು ವಿವೋ ಕೂಡ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಐಪಿಎಲ್ನ 2022 ಮತ್ತು 2023 ಸೀಸನ್‌ಗಳಿಗೆ ಟಾಟಾ ಸಮೂಹ ಸಂಸ್ಥೆ ಟೈಟಲ್ ಪ್ರಾಯೋಜಕತ್ವವನ್ನು ಹೊಂದಿರಲಿದೆ. ಆದರೆ ಈ ಒಪ್ಪಂದದ ಮೊತ್ತ ಇನ್ನೂ ಬಹಿರಂಗಪಡಿಸಿಲ್ಲವಾದರೂ, ವಿವೋಗಿಂತಲೂ ಹೆಚ್ಚಿನ ಮೊತ್ತವನ್ನು ಬಿಸಿಸಿಐ ಪಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದೇ ಸಂದರ್ಭದಲ್ಲಿ ಅಹ್ಮದಾಬಾದ್ ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡಿರುವ ಸಿವಿಸಿ ಕ್ಯಾಪಿಟಲ್ಗೆ ಆಡಳಿತ ಮಂಡಳಿ ಲೆಟರ್ ಆಫ್ ಇಂಟೆಂಟ್ (LOI) ಅನ್ನು ಅನುಮೋದಿಸಿದೆ ಎಂದು ಪಟೇಲ್ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಈ ಮೂವರು ಆಟಗಾರರ ಮೇಲೆ ಅಹ್ಮದಾಬಾದ್ ಕಣ್ಣು, ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ ಪಟ್ಟ: ವರದಿ