ಹೈದರಾಬಾದ್: 14 ವರ್ಷಗಳ ಹಿಂದೆ ಇದೇ ದಿನ, ಎಂಎಸ್ ಧೋನಿ ನೇತೃತ್ವದ ಭಾರತ ತಂಡವು ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ - 20 ವಿಶ್ವಕಪ್ ಉದ್ಘಾಟನಾ ಆವೃತ್ತಿಯಲ್ಲಿ ಪಾಕಿಸ್ತಾನದ ವಿರುದ್ಧ ವಿಜಯಶಾಲಿಯಾಗಿ ಹೊರಹೊಮ್ಮಿತ್ತು.
ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ವೀರೇಂದ್ರ ಸೆಹ್ವಾಗ್ ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದರು. ಈ ಹಿನ್ನೆಲೆಯಲ್ಲಿ ಆರಂಭಿಕ ಆಟಗಾರರಾಗಿ ಯೂಸುಫ್ ಪಠಾಣ್ ಮತ್ತು ಗೌತಮ್ ಗಂಭೀರ್ ಕಣಕ್ಕಿಳಿದಿದ್ದರು.
ಯೂಸುಫ್ ಪಠಾಣ್ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಒಟ್ಟು 15 ರನ್ ಗಳಿಸಿ ಔಟ್ ಆದರು. ಇನ್ನು ರಾಬಿನ್ ಉತ್ತಪ್ಪ ಸಹ 8 ರನ್ ಗಳಿಸಿ ಪೆವಿಲಿಯನ್ಗೆ ಹಾದಿ ಹಿಡಿದಿದ್ದರು. ಭಾರತ ಅದಾಗಲೇ 40 ರನ್ಗೆ ಎರಡು ವಿಕೆಟ್ಗಳನ್ನು ಕಳೆದುಕೊಂಡಿತ್ತು.
ಇನ್ನು ಕ್ರೀಸ್ನಲ್ಲಿದ್ದ ಗೌತಮ್ ಗಂಭೀರ್ಗೆ ಯುವರಾಜ್ ಸಿಂಗ್ ಸಾಥ್ ನೀಡಿದ್ದರು. ಆದರೆ 14 ನೇ ಓವರ್‌ನಲ್ಲಿ ಯುವರಾಜ್ ಸಿಂಗ್ 14 ರನ್ ಬಾರಿಸಿ ನಿರ್ಗಮಿಸಿದರು. ಈ ವೇಳೆ ಮೈದಾನಕ್ಕಿಳಿದ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದರು. ಅವರು ಕೇವಲ 54 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್ ಹೊಡೆಯುವ ಮೂಲಕ 75 ರನ್ ಗಳಿಸಿದರು. ಅಂತಿಮವಾಗಿ ರೋಹಿತ್ ಶರ್ಮಾ ಕೇವಲ 16 ಎಸೆತಗಳಲ್ಲಿ 30 ರನ್ ಗಳಿಸಿ ಭಾರತದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ 157 ರನ್ಗೆ ತಲುಪಿಸಿದರು.
ಕಡಿಮೆ ಮೊತ್ತ ಬೆನ್ನಟ್ಟಿ ಪೈಪೋಟಿ ಕೊಟ್ಟಿದ್ದ ಪಾಕ್
ಇನ್ನು ಪಾಕ್ ಪರ ಆಡಿದ ಶಾಹಿದ್ ಅಫ್ರಿದಿ, ಯೂನಿಸ್ ಖಾನ್, ಶೋಯೆಬ್ ಮಲಿಕ್ ಸೇರಿದಂತೆ ಒಟ್ಟು 6 ವಿಕೆಟ್ಗಳನ್ನು ಭಾರತ ತಂಡ ಪಡೆದುಕೊಂಡಿತ್ತು. ಆ ವೇಳೆ ಪಾಕಿಸ್ತಾನಕ್ಕೆ 77 ರನ್ ಆಗಿತ್ತು. ಆದರೆ, ಮಿಸ್ಬಾ ಉಲ್ ಹಕ್ ಕ್ರೀಸ್ನಲ್ಲಿ ಭರವಸೆಯನ್ನು ಬಿಟ್ಟುಕೊಡದೆ ಆಡಿದರು. ಇನ್ನು ಅಂತಿಮ ಓವರ್‌ನಲ್ಲಿ ಪಾಕಿಸ್ತಾನ ಗೆಲ್ಲಲು ಕೇವಲ 13 ರನ್ ಬೇಕಿತ್ತು.
ಕೊನೆ ಓವರ್‌ನಲ್ಲಿ ಕಮಾಲ್ ಮಾಡಿದ್ದ ಧೋನಿ ನಿರ್ಧಾರ
ಈ ಸಂದರ್ಭದಲ್ಲಿ ಧೋನಿ ಚುರುಕುತನ ಪ್ರದರ್ಶಿಸಿ ಕೊನೆಯ ಓವರ್‌ನಲ್ಲಿ ಬೌಲ್ ಮಾಡಲು ಜೋಗಿಂದರ್ ಶರ್ಮಾಗೆ ಅವಕಾಶ ನೀಡಿದರು. ಈ ವೇಳೆ ಮಿಸ್ಬಾ ಓವರ್‌ನ ಎರಡನೇ ಎಸೆತದಲ್ಲಿ ಸಿಕ್ಸರ್ ಹೊಡೆದರು. ಪಂದ್ಯ ಇನ್ನೇನು ಪಾಕ್ ಪರ ಆಯಿತು ಎನ್ನುವಷ್ಟರಲ್ಲಿ ಓವರ್‌ನ ಮೂರನೇ ಎಸೆತದಲ್ಲಿ ಮಿಸ್ಬಾ ಬಾರಿಸಿದ ಸ್ಕೂಪ್ ಶಾಟ್ನ್ನು ಶ್ರೀಶಾಂತ್ ಕ್ಯಾಚ್ ಹಿಡಿದರು. ಪರಿಣಾಮ ಭಾರತವು ಐದು ರನ್‌ಗಳಿಂದ ಫೈನಲ್‌ನಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಪ್ರತಿಷ್ಠಿತ ಟಿ- 20 ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಇದಾದ ನಂತರ, ಧೋನಿ ನೇತೃತ್ವದ ಟೀಂ ಇಂಡಿಯಾ ಇನ್ನೂ ಎರಡು ಐಸಿಸಿ ಟ್ರೋಫಿಗಳನ್ನು ಎತ್ತಿ ಹಿಡಿದಿದೆ. ಅವುಗಳೆಂದರೆ 50-ಓವರ್ ವಿಶ್ವಕಪ್ 2011 ಮತ್ತು ಚಾಂಪಿಯನ್ಸ್ ಟ್ರೋಫಿ 2013.
2007ರ ಟಿ 20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಎಸೆದ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿದ ಯುವರಾಜ್ ಸಿಂಗ್ ಭಾರತದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 70 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು.