ನವದೆಹಲಿ: ಐಪಿಎಲ್‌ನಂತಹ ಟೂರ್ನಿಯಲ್ಲಿ ನಾಯಕರಾಗಿ ಭಾರತೀಯ ಆಟಗಾರರು ಯಶಸ್ಸು ಕಂಡರೆ ಅದು ರಾಷ್ಟ್ರೀಯ ತಂಡಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ನಾಯಕತ್ವದಲ್ಲಿ ಪಳಗಿದ ಕ್ರಿಕೆಟಿಗ ವೃತ್ತಿ ಬದುಕಿನಲ್ಲಿ ಇನ್ನಷ್ಟು ವೇಗವನ್ನು ಪಡೆಯಲಿದ್ದಾನೆ ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯಟ್ಟಿದ್ದಾರೆ.
ಗುಜರಾತ್ ಟೈಟಾನ್ಸ್ ಅನ್ನು ಚಾಂಪಿಯನ್ ಮಾಡಿದ ಹಾರ್ದಿಕ್ ಪಾಂಡ್ಯಾ ನಿಜಕ್ಕೂ ಅಭಿನಂದನಾರ್ಹ. ಅವರೊಬ್ಬ ಅದ್ಭುತ ಆಟಗಾರ. ಇನ್ನೊಂದು ಹೊಸ ತಂಡದ ಸಾರಥ್ಯ ವಹಿಸಿದ್ದ ಕೆ.ಎಲ್ ರಾಹುಲ್ ಕೂಡ ಉತ್ತಮ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಫೈನಲ್ನಲ್ಲಿ ಸೋತರೂ ರಾಜಸ್ತಾನ ರಾಯಲ್ಸ್ ತಂಡವನ್ನು ಉತ್ತಮವಾಗಿ ಮುನ್ನಡೆಸಿದ ಸಂಜು ಸ್ಯಾಮ್ಸನ್ ನಾಯಕತ್ವ ಕೂಡ ಪ್ರಭಾವದಿಂದ ಕೂಡಿದೆ ಎಂದು ರಾಹುಲ್ ಹೊಗಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ದ್ರಾವಿಡ್, ಯುವ ಬ್ಯಾಟರ್‌ಗಳು ತಂಡವನ್ನು ಮುನ್ನಡೆಸುವುದನ್ನು ನೋಡುವುದು ನಿಜಕ್ಕೂ ಅದ್ಭುತವಾಗಿದೆ. ಇದು ಆಟಗಾರರಾಗಿ ಬೆಳೆಯಲು ಮತ್ತು ರಾಷ್ಟ್ರೀಯ ತಂಡಕ್ಕೆ ನಿಜಕ್ಕೂ ಸಹಾಯವಾಗಲಿದೆ. ಕಠಿಣ ಪರಿಸ್ಥಿತಿಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ತಂಡಗಳನ್ನು ಮುನ್ನಡೆಸಿದ ಅನುಭವ ಇರಬೇಕು. ಈ ನಿಟ್ಟಿನಲ್ಲಿ ಐಪಿಎಲ್‌ನಲ್ಲಿ ಭಾರತೀಯ ಆಟಗಾರರು ತೋರಿದ ನಾಯಕತ್ವ ಗುಣವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಸೇವೆ ತಂಡಕ್ಕೆ ಅಗತ್ಯವಾಗಿದೆ. ಹಾರ್ದಿಕ್ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿ ತಮ್ಮಲ್ಲಿ ಒಬ್ಬ ನಾಯಕನಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಬೌಲಿಂಗ್ಗೆ ಮರಳಿರುವುದು ನಿಜಕ್ಕೂ ತಂಡಕ್ಕೆ ನೆರವಾಗಲಿದೆ ಎಂದಿದ್ದಾರೆ.
ಐಪಿಎಲ್‌ನಲ್ಲಿ ಅವರ ನಾಯಕತ್ವವು ತುಂಬಾ ಪ್ರಭಾವಶಾಲಿಯಾಗಿತ್ತು. ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡಿದರು. ಬೌಲಿಂಗ್ ಮಾಡಲು ಶಕ್ತರಾದ ಕಾರಣ ಅವರ ಸೇವೆ ಭಾರತ ತಂಡಕ್ಕೆ ಸಂಪೂರ್ಣವಾಗಿ ಸಿಗಲಿದೆ. ಕ್ರಿಕೆಟಿಗನಾಗಿ ನಾವು ಅವರಿಂದ ಉತ್ಕೃಷ್ಟ ಆಟವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಗುರುವಾರದಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ-20 ಸರಣಿಯಲ್ಲಿ ದಕ್ಷಿಣ ಅಫ್ರಿಕಾ ವಿರುದ್ಧ ಭಾರತ ತಂಡ ಕಣಕ್ಕಿಳಿಯಲು ಸಜ್ಜಾಗಿದೆ.
ಓದಿ: ಸಿಡಬ್ಲ್ಯುಜಿ ತಂಡಕ್ಕೆ ಮತ್ತೆ ಸೇರ್ಪಡೆಗೊಂಡ ಟೇಬಲ್ ಟೆನಿಸ್ ಆಟಗಾರ್ತಿ ದಿಯಾ ಚಿತಾಲೆ