ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿರುವ ನ್ಯೂಜಿಲ್ಯಾಂಡ್ನ ಶೇನ್ ಬಾಂಡ್ರನ್ನು ಯುಎಇ ಟಿ20 ಲೀಗ್ನ ಎಂಐ ಎಮಿರೇಟ್ಸ್ ತಂಡದ ಪ್ರಧಾನ ಕೋಚ್ ಆಗಿ ನೇಮಕ ಮಾಡಲಾಗಿದೆ. ಜೊತೆಗೆ ಪಾರ್ಥಿವ್ ಪಟೇಲ್ರನ್ನು ಬ್ಯಾಟಿಂಗ್, ವಿನಯ್ ಕುಮಾರ್ ಬೌಲಿಂಗ್ ಮತ್ತು ಜೇಮ್ಸ್ ಫ್ರಾಂಕ್ಲಿನ್ರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಲಾಗಿದೆ.
ಇದಲ್ಲದೇ, ಯುಎಇ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿರುವ ರಾಬಿನ್ ಸಿಂಗ್ರನ್ನು ಮುಂಬೈ ಇಂಡಿಯನ್ಸ್ ಎಮಿರೇಟ್ಸ್ ಕ್ರಿಕೆಟ್‌ನ ಜನರಲ್ ಮ್ಯಾನೇಜರ್ ಆಗಿಯೂ ಆಯ್ಕೆ ಮಾಡಲಾಗಿದೆ. ಶೇನ್ ಬಾಂಡ್ 2015 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದರು. ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವ ಅವರು ಈವರೆಗೂ ತಂಡ ಗೆದ್ದ 4 ಪ್ರಶಸ್ತಿಗಳ ಭಾಗವಾಗಿದ್ದರು.
ಎಂಐ ಎಮಿರೇಟ್ಸ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕವಾದ ಪಾರ್ಥಿವ್ ಪಟೇಲ್ ಈ ಹಿಂದೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. 2020 ರಿಂದ ಟ್ಯಾಲೆಂಟ್ ಸ್ಕೌಟಿಂಗ್ ತಂಡದ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ. ತಂಡದ ಇನ್ನೊಬ್ಬ ಮಾಜಿ ಆಟಗಾರ ವಿನಯ್ ಕುಮಾರ್ 2021 ರಿಂದ ಸ್ಕೌಟಿಂಗ್ ತಂಡದಲ್ಲಿದ್ದು, ಇದೀಗ ಯುಎಇ ತಂಡದ ಬೌಲಿಂಗ್ ವಿಭಾಗಕ್ಕೆ ನಿರ್ದೇಶನ ನೀಡಲಿದ್ದಾರೆ.
ಪಾರ್ಥಿವ್ ಪಟೇಲ್ ಮತ್ತು ವಿನಯ್ ಕುಮಾರ್ ಅವರು ಮುಂಬೈ ಇಂಡಿಯನ್ಸ್ ತಂಡ 2015 ಮತ್ತು 2017 ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದ ತಂಡದ ಸದಸ್ಯರಾಗಿದ್ದರು. ತಂಡದ ಮಾಜಿ ಆಲ್ರೌಂಡರ್ ಆಗಿದ್ದ ಜೇಮ್ಸ್ ಫ್ರಾಂಕ್ಲಿನ್ ಎಂಐ ಎಮಿರೇಟ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಮಾಡಲಿದ್ದಾರೆ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಭಾರತದ ಐಪಿಎಲ್ ಮಾತ್ರವಲ್ಲದೇ, ಯುಎಇ ಲೀಗ್, ಕೆರೆಬಿಯನ್ ಲೀಗ್ನಲ್ಲಿಯೂ ತಂಡದ ಫ್ರಾಂಚೈಸಿ ಹೊಂದಿದೆ.
ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಅಶ್ವಿನ್: ಇಂಜಿನಿಯರ್ ಆಗಬೇಕಿದ್ದ ವ್ಯಕ್ತಿ ಕ್ರಿಕೆಟರ್ ಆಗಿದ್ದು ಹೇಗೆ?