ರಾಂಚಿ(ಜಾರ್ಖಂಡ್): ಭಾರತ-ನ್ಯೂಜಿಲ್ಯಾಂಡ್ (India-New Zealand T20I) ನಡುವೆ ನಿನ್ನೆ ಜೈಪುರ್ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ. ಇದೀಗ ನಾಳೆ ರಾಂಚಿಯಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ತಂಡ ಭಾಗಿಯಾಗಲಿದೆ. ಈ ನಡುವೆ ಪಂದ್ಯದ ಮೇಲೆ ಕರಿನೆರಳು ಆವರಿಸಿದೆ.
ರಾಂಚಿಯ (JSCA International Stadium) ಮೈದಾನದಲ್ಲಿ ನಾಳೆ ಸಂಜೆ 7 ಗಂಟೆಗೆ ಪಂದ್ಯ ಆಯೋಜನೆಗೊಂಡಿದೆ. ಮೈದಾನಕ್ಕೆ ಬಂದು ಪಂದ್ಯ ವೀಕ್ಷಣೆ ಮಾಡಲು ಶೇ. 100 ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಹೈಕೋರ್ಟ್‌ನಲ್ಲಿ (Jharkhand High Court)ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಕೋವಿಡ್-19 (Covid-19) ಕಾರಣದಿಂದಾಗಿ ರಾಜ್ಯದಲ್ಲಿ ಮಕ್ಕಳು ಶಾಲೆಗೆ ಹೋಗುವುದಕ್ಕೆ ಇಲ್ಲಿಯವರೆಗೆ ನಿರ್ಬಂಧ ಹೇರಲಾಗಿದೆ. ಆದರೆ ಪೋಷಕರು ತಮ್ಮ ಮಕ್ಕಳೊಂದಿಗೆ ಸೇರಿ ಕ್ರಿಕೆಟ್ ಮೈದಾನಕ್ಕೆ ಹೋಗಲು ಅನುಮತಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್ ಪಂದ್ಯ ಮುಂದೂಡಬೇಕು/ ಶೇ. 50ರಷ್ಟು ಜನರಿಗೆ ಮಾತ್ರ ಪಂದ್ಯ ವೀಕ್ಷಣೆ ಮಾಡಲು ಅನುಮತಿ ನೀಡಬೇಕೆಂದು ವಕೀಲ ಧೀರಜ್ ಕುಮಾರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: IND vs NZ 1st T20: ಕಿವೀಸ್ ವಿರುದ್ಧ ಜಯದೊಂದಿಗೆ ರೋಹಿತ್-ದ್ರಾವಿಡ್ ಯುಗಾರಂಭ
ಜೈಪುರ್ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ನಡೆದ ಪಂದ್ಯಕ್ಕಾಗಿ ಶೇ. 100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು. ಆದರೆ ಆರ್ಟಿ-ಪಿಸಿಆರ್ (RT-PCR Report) ಜೊತೆಗೆ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡಿರುವ ಪ್ರಮಾಣಪತ್ರ ತೆಗೆದುಕೊಂಡು ಬರುವುದು ಕಡ್ಡಾಯವಾಗಿದೆ. ರಾಂಚಿ ಮೈದಾನಕ್ಕೂ ಬರುವ ಪ್ರೇಕ್ಷಕರಿಗೂ ಇದು ಕಡ್ಡಾಯ. ನಿನ್ನೆಯ ಪಂದ್ಯ ವೀಕ್ಷಣೆ ವೇಳೆ ಪ್ರೇಕ್ಷಕರು ಮಾಸ್ಕ್ ಹಾಕಿಕೊಳ್ಳದೇ ಸಾಮಾಜಿಕ ಅಂತರ ನಿರ್ಲಕ್ಷ್ಯ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.