ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನದ ಸೂಪರ್ ಲೀಗ್ 2025ರಲ್ಲಿ ಒಂದೇ ಸಮಯದಲ್ಲಿ ನಡೆಯಲಿದೆ. ವಿದೇಶಿ ಆಟಗಾರರು ಯಾವ ಲೀಗ್ನಲ್ಲಿ ಭಾಗಿಯಾಗಲಿದ್ದಾರೆಂಬುದು ಇದೀಗ ಹುಟ್ಟುಕೊಂಡಿರುವ ಪ್ರಶ್ನೆ. ಜೊತೆಗೆ ಫ್ರಾಂಚೈಸಿಗಳೂ ಕೂಡಾ ಗೊಂದಲಕ್ಕೊಳಗಾಗಿವೆ.
2025ರಲ್ಲಿ ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೊಂಡಿದೆ. ಇದರ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ. ಪಾಕಿಸ್ತಾನದಲ್ಲೂ ಪಾಕ್ ಸೂಪರ್ ಲೀಗ್ ನಡೆಯಲಿದೆ. ಐಪಿಎಲ್ ಸುಮಾರು ಎರಡೂವರೆ ತಿಂಗಳ ಅವಧಿ ಮಾರ್ಚ್ನಿಂದ ಪ್ರಾರಂಭವಾಗಿ ಜೂನ್ವರೆಗೆ ನಡೆಯುತ್ತದೆ. ಪಾಕ್ನಲ್ಲಿ ಮಾರ್ಚ್- ಮೇ ತಿಂಗಳಲ್ಲಿ ಪಾಕ್ನಲ್ಲಿ ಟಿ20 ಲೀಗ್ ಆಯೋಜನೆಗೊಳ್ಳಲಿದೆ. ಐಪಿಎಲ್ನೊಂದಿಗೆ ಪಾಕ್ ಲೀಗ್ ಕ್ಲ್ಯಾಶ್ ಆಗ್ತಿರುವುದು ಇದೇ ಮೊದಲು. ಹೀಗಾಗಿ, ಆಟಗಾರರು ಯಾವ ತಂಡದಲ್ಲಿ ಭಾಗಿಯಾಗಲಿದ್ದಾರೆ ಎಂಬುದು ಬಹಳ ಆಸಕ್ತಿದಾಯಕ ವಿಚಾರವಾಗಿದೆ.
ಇದನ್ನೂ ಓದಿ: ಮುಂದಿನ 4 ವರ್ಷಗಳ ಕ್ರಿಕೆಟ್ ವೇಳಾಪಟ್ಟಿ ರಿಲೀಸ್: ಏಕದಿನ, ಟಿ20, ಟೆಸ್ಟ್ ಸೇರಿ 777 ಪಂದ್ಯ
ಭದ್ರತಾ ಸಮಸ್ಯೆಯಿಂದಾಗಿ ಪಾಕ್ ಈಗಾಗಲೇ ಅನೇಕ ಐಸಿಸಿ ಟೂರ್ನಿ ಕಳೆದುಕೊಂಡಿದೆ. ಆದರೆ, 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿರುವ ಕಾರಣ ಅದಕ್ಕೋಸ್ಕರ ತನ್ನ ಟಿ20 ಲೀಗ್ ಮುಂದೂಡಿದೆ. ಹೀಗಾಗಿ, ಐಪಿಎಲ್ ಜೊತೆ ಮುಖಾಮುಖಿಯಾಗುವ ಕಾರಣ, ಪ್ಲೇಯರ್ಸ್ಗೂ ಇನ್ನಿಲ್ಲದ ಗೊಂದಲ ಉದ್ಭವವಾಗಿದೆ.
ವಿಶ್ವದ ಶ್ರೀಮಂತ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿದೇಶಿ ಪ್ಲೇಯರ್ಸ್ಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗ್ತಿದೆ. ಹೀಗಾಗಿ, ಹೆಚ್ಚಿನ ಪ್ಲೇಯರ್ಸ್ ಇದರಲ್ಲಿ ಭಾಗಿಯಾಗುವ ಸಾಧ್ಯತೆ ಸಹ ದಟ್ಟವಾಗಿದೆ.