ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಂಜಾಬ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತವರಿನ ಮೈದಾನದಲ್ಲಿ ರೋಚಕ ಗೆಲುವು ದಾಖಲಿಸಿದೆ. ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಬೌಂಡರಿ ಸಿಡಿಸಿ ಮ್ಯಾಜಿಕ್ ಮಾಡಿದರು. ಇದರಿಂದ ಐದು ವಿಕೆಟ್ಗಳಿಂದ ಜಯ ಕಂಡಿದೆ.
ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ಟಾಸ್ ಗೆದ್ದ ಪಂಜಾಬ್ ನಾಯಕ ಶಿಖರ್ ಧವನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಉತ್ತಮ ಆರಂಭಿಕ ಜೊತೆಯಾಟ ತಂಡಕ್ಕೆ ಸಿಗಲಿಲ್ಲ. ತಂಡದ ಮೊತ್ತ 21 ರನ್ ಆಗಿದ್ದಾಗ ಹರ್ಷಿತ್ ಪ್ರಭಾಸಿಮ್ರಾನ್ ಸಿಂಗ್ (12) ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೇ ಭಾನುಕಾ ರಾಜಪಕ್ಸೆ ಶೂನ್ಯಕ್ಕೆ ಪೆವಿಲಿಯನ್ಗೆ ಮರಳಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ (15) ಮತ್ತು ಜಿತೇಶ್ ಶರ್ಮಾ (21) ಕೂಡ ಕೆಕೆಆರ್ ಬೌಲರ್ಗಳ ಮುಂದೆ ಮಂಕಾದರು. ಮತ್ತೊಂಡೆದೆ, ಶಿಖರ್ ಧವನ್ ಮಾತ್ರ ತಮ್ಮ ನಾಯಕತ್ವದ ಆಟ ಪ್ರದರ್ಶಿಸಿದರು. 47 ಬಾಲ್ ಎದುರಿಸಿದ ಧವನ್ 9 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 57 ರನ್ ಗಳಿಸಿ ತಂಡವನ್ನು 100ರ ಗಡಿ ದಾಟಿಸಿ ವಿಕೆಟ್ ಕೊಟ್ಟರು.
ನಂತರ ಬಂದ ಸ್ಯಾಮ್ ಕರನ್ (4) ಮತ್ತು ರಿಷಿ ಧವನ್ (19) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೊನೆಯ ಎರಡು ಓವರ್ನಲ್ಲಿ ಶಾರುಖ್ ಖಾನ್ ಮತ್ತು ಹರ್‌ಪ್ರೀತ್ ಬ್ರಾರ್ ಜೋಡಿ 36 ರನ್ ತಂದು 150ರ ಒಳಗೆ ಕುಸಿಯುತ್ತಿದ್ದ ತಂಡದ ಮೊತ್ತವನ್ನು 180ಕ್ಕೆ ತಲುಪಿಸಿದರು. ಶಾರುಖ್ ಖಾನ್ 8 ಬಾಲ್ನಲ್ಲಿ 21 ರನ್ ಗಳಿಸಿದರೆ, ಹರ್‌ಪ್ರೀತ್ ಬ್ರಾರ್ 9 ಬಾಲ್ನಲ್ಲಿ 17 ರನ್ ಕಲೆ ಹಾಕಿ ತಂಡಕ್ಕೆ ಆಸರೆಯಾದರು. ಕೆಕೆಆರ್ ಪರ ವರುಣ್ ಚಕ್ರವರ್ತಿ ಮೂರು, ಹರ್ಷಿತ್ ರಾಣಾ ಎರಡು ವಿಕೆಟ್ ಹಾಗೂ ನಿತೀಶ್ ರಾಣಾ, ಸುಯಶ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಕೆಕೆಆರ್ ಸಂಘಟಿತ ಬ್ಯಾಟಿಂಗ್ ನೀಡಿತು. ಆರಂಭಿಕ ಆಟಗಾರರಾದ ರಹಮಾನುಲ್ಲಾ ಗುರ್ಬಾಜ್ 15 ರನ್ ಮತ್ತು ಜೇಸನ್ ರಾಯ್ 38 ರನ್ ಬಾರಿಸಿದರು. ವೆಂಕಟೇಶ್ ಅಯ್ಯರ್ 11 ರನ್ ಗಳಿಸಿ ನಿರ್ಗಮಿಸಿದರು. ಮತ್ತೊಂದೆಡೆ, ನಾಯಕ ನಿತೀಶ್ ರಾಣಾ ಉತ್ತಮ ಬ್ಯಾಟಿಂಗ್ ಬೀಸಿದರು. 38 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ನೊಂದಿಗೆ 51 ರನ್ ಕಲೆ ಹಾಕಿ ವಿಕೆಟ್ ಒಪ್ಪಿಸಿದರು.
ಇದರ ನಡುವೆ ಆಂಡ್ರೆ ರಸೆಲ್ ಮತ್ತು ರಿಂಕು ಸಿಂಗ್ ಕೂಡ ಬಿರುಸಿನ ಆಟ ಪ್ರರ್ದಶಿಸಿದರು. ಕೊನೆಯ ಎರಡು ಓವರ್ನಲ್ಲಿ ತಂಡದ ಗೆಲುವಿಗೆ 26 ರನ್ ಬೇಕಾಗಿತ್ತು. ಆಗ 18ನೇ ಓವರ್ ಅಂತ್ಯಕ್ಕೆ ರಸೆಲ್ ಸಿಡಿಸಿದ ಮೂರು ಸಿಕ್ಸರ್ ಸಮೇತ 20 ರನ್ ಬಂದವು. ಆದರೆ, 23 ಎಸೆತಗಳನ್ನು ಎದುರಿಸಿ ತಲಾ ಮೂರು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ್ದ ರಸೆಲ್ ತಂಡದ ಗೆಲುವಿಗೆ ಇನ್ನೂ ಎರಡು ರನ್ ಬಾಕಿ ಇದ್ದಾಗ 19ನೇ ಓವರ್ನ ಐದನೇ ಬಾಲ್ನಲ್ಲಿ ವಿಕೆಟ್ ಒಪ್ಪಿಸಿದರು. ಈ ವೇಳೆ ರಿಂಕು ಸಿಂಗ್ ಮ್ಯಾಜಿಕ್ ಮಾಡಿದರು. ಅಂತಿಮ ಬಾಲ್ನಲ್ಲಿ ಬೌಂಡರಿ ಸಿಡಿಸಿ ತಂಡಕ್ಕೆ ಮತ್ತೊಂದು ರೋಚಕ ಗೆಲುವು ತಂದುಕೊಟ್ಟರು. 10 ಬಾಲ್ಗಳಲ್ಲಿ ಎರಡು ಬೌಂಡರಿ, ಒಂದು ಸಿಕ್ಸರ್ ಸಮೇತ 21 ಬಾರಿಸಿ ರಿಂಕು ಸಿಂಗ್ ಅಜೇಯರಾಗಿ ಉಳಿದರು. ಇದರೊಂದಿಗೆ ಕೆಕೆಆರ್ ತಂಡ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದೆ.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಸ್ಥಾನ ಪಡೆದ ಇಶಾನ್ : ಕೆಎಲ್ ರಾಹುಲ್ ಬದಲಿ ಕಿಶನ್