ಅಹಮದಾಬಾದ್ : ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಹೈವೋಲ್ಟೇಜ್ ಫೈನಲ್ ಪಂದ್ಯದ ನಡುವೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಜರ್ಸಿಯನ್ನು ಬಿಡುಗಡೆ ಮಾಡುವ ಮೂಲಕ ಈ ಲೀಗ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಪ್ರವೇಶಿಸಿತು.
ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 15ನೇ ಸೀಸನ್‌ನ ಅಂತಿಮ ಪಂದ್ಯದ ವೇಳೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಜರ್ಸಿಯನ್ನು ಬಿಡುಗಡೆ ಮಾಡಲಾಯಿತು. ಹೀಗಾಗಿ, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಮಾಣ ಪ್ರತಿಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ಗೆ ನೀಡಲಾಗಿದೆ.
ಓದಿ: ಫೈನಲ್ ಗೆದ್ದು ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ ಗುಜರಾತ್... ರಾಜಸ್ಥಾನ ಕನಸು ಭಗ್ನ
ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಈ ವಿಷಯವನ್ನು ಪ್ರಕಟಿಸಿದ್ದರು. ಪಂದ್ಯಾವಳಿಯ 15ನೇ ಸೀಸನ್ ಪ್ರತಿನಿಧಿಸುವ ಜೆರ್ಸಿ ಸಂಖ್ಯೆ 15 ಆಗಿದೆ. ಇದು ಐಪಿಎಲ್ 2022ರಲ್ಲಿ ಭಾಗವಹಿಸುವ ಎಲ್ಲಾ 10 ತಂಡಗಳ ಚಿಹ್ನೆಗಳನ್ನು ಸಹ ಹೊಂದಿದೆ ಎಂದು ಹೇಳಿದರು.
ನಾಯಕ ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಆಟ, ಗಿಲ್ (45), ಮಿಲ್ಲರ್ (32) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಎದುರಾಳಿ ರಾಜಸ್ಥಾನ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿರುವ ಗುಜರಾತ್ ಟೈಟಾನ್ಸ್ ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬಳಗದ ವಿರುದ್ಧ ಗೆಲುವಿನ ಕಹಳೆ ಮೊಳಗಿಸಿತು. ಈ ಮೂಲಕ ಐಪಿಎಲ್ನಲ್ಲಿ ಮತ್ತೊಂದು ಹೊಸ ಚಾಂಪಿಯನ್ ತಂಡ ಉದಯಿಸಿದಂತಾಗಿದೆ.