ಮುಂಬೈ: ಬಲಿಷ್ಠ ಬೌಲಿಂಗ್, ಸ್ಫೋಟಕ ಬ್ಯಾಟರ್ಗಳನ್ನು ಹೊಂದಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಮತ್ತು ಸಂಜು ಸಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಗುರುವಾರದ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
3 ಗೆಲುವು 1 ಸೋಲಿನೊಂದಿಗೆ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಟೂರ್ನಿಯಲ್ಲೇ ಅತ್ಯಂತ ಶ್ರೇಷ್ಠ ಮಟ್ಟದಲ್ಲಿದೆ. ಟ್ರೆಂಟ್ ಬೌಲ್ಟ್, ಪ್ರಸಿಧ್ ಕೃಷ್ಣರಂತಹ ವೇಗಿಗಳು, ವಿಶ್ವದ ಶ್ರೇಷ್ಠ ಸ್ಪಿನ್ನರ್ಗಳಲ್ಲಿ ಒಬ್ಬರಾದ ಯಜ್ವೇಂದ್ರ ಚಹಲ್ ಟೂರ್ನಿಯ ಗರಿಷ್ಠ ವಿಕೆಟ್ ಪಡೆದ ಬೌಲರ್ ಆದರೆ, ಇವರಿಗೆ ಅಶ್ವಿನ್ ರಂತಹ ಅನುಭವಿಗಳ ಬೆಂಬಲವಿದೆ. ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಕುಲದೀಪ್ ಸೆನ್ ಕೂಡ ಕೊನೆಯ ಓವರ್ನಲ್ಲಿ 15 ರನ್ ಡಿಫೆಂಡ್ ಮಾಡಿಕೊಳ್ಳುವ ಮೂಲಕ ತಂಡದ ಬೌಲಿಂಗ್ ಬಲವನ್ನು ದುಪ್ಪಟ್ಟು ಮಾಡಿದ್ದಾರೆ.
ಬ್ಯಾಟಿಂಗ್ನಲ್ಲಿ ಜಾಸ್ ಬಟ್ಲರ್, ಪಡಿಕ್ಕಲ್ ಉತ್ತಮ ಆರಂಭ ಒದಗಿಸಿಕೊಟ್ಟರೆ, ಸಂಜು ಸಾಮ್ಸನ್ ಮತ್ತು ಶಿಮ್ರಾನ್ ಹೆಟ್ಮಾಯರ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಹಾಗಾಗಿ ಇಲ್ಲಿಯವರೆಗಿನ ಪ್ರದರ್ಶನ ಪರಿಗಣಿಸಿದರೆ ರಾಯಲ್ಸ್ ಇಡೀ ಲೀಗ್ನಲ್ಲೇ ಅತ್ಯುತ್ತಮ ಸಮತೋಲನ ಹೊಂದಿರುವ ತಂಡವಾಗಿದೆ.
ಹಾರ್ದಿಕ್ ನೇತೃತ್ವದ ಗುಜರಾತ್ ಟೈಟನ್ಸ್ ಹ್ಯಾಟ್ರಿಕ್ ಗೆಲುವಿನ ನಂತರ ಮೊದಲ ಸೋಲು ಕಂಡಿದೆ. ಟೈಟನ್ಸ್ ರಾಜಸ್ಥಾನ್ ರಾಯಲ್ಸ್ನಲ್ಲಿ ಇರುವಂತಹ ಗುಣಮಟ್ಟದ ಬ್ಯಾಟರ್ಗಳನ್ನು ಹೊಂದಿಲ್ಲವಾದರೂ ಬೌಲಿಂಗ್ನಲ್ಲಿ ಸರಿಸಾಟಿಯಾಗಿ ನಿಲ್ಲಲಿದೆ. ವಿಶ್ವಶ್ರೇಷ್ಠ ಸ್ಪಿನ್ನರ್ ರಶೀದ್ ಖಾನ್, ಅನುಭವಿ ವೇಗಿ ಮೊಹಮ್ಮದ್ ಶಮಿ ಮತ್ತು ಲಾಕಿ ಫರ್ಗ್ಯುಸನ್ ಜೊತೆಗೆ ಸ್ವತಃ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ.
ಬ್ಯಾಟಿಂಗ್ನಲ್ಲಿ ಶುಬ್ಮನ್ ಗಿಲ್ಗೆ ಬೆಂಬಲ ನೀಡುವಂತಹ ಪರಿಪೂರ್ಣ ಬ್ಯಾಟರ್ ಕೊರತೆಯಿದೆ. ವೇಡ್ ಮತ್ತು ಮಿಲ್ಲರ್ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಹಾರ್ದಿಕ್ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆಯೇ ವಿನಃ ಅವರಿಂದ ಸ್ಫೋಟಕ ಆಟ ಇನ್ನೂ ಕಂಡುಬಂದಿಲ್ಲ. ರಾಹುಲ್ ತೆವಾಟಿಯಾ ಮತ್ತು ಅಭಿನವ್ ಮನೋಹರ್ ತಮ್ಮ ಫಿನಿಶಿಂಗ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ನಾಳಿನ ಪಂದ್ಯದಲ್ಲಿ ಟೈಟನ್ಸ್ ಅಗ್ರ ಕ್ರಮಾಂಕ ಉತ್ತಮ ಪ್ರದರ್ಶನ ತೋರಿದರೆ ಒಂದೊಳ್ಳೆ ಹೈವೊಲ್ಟೇಜ್ ಪಂದ್ಯಕ್ಕೆ ಡಿ.ವೈ.ಪಾಟೀಲ್ ಅಕಾಡೆಮಿ ಸಾಕ್ಷಿಯಾಗಲಿದೆ.
ಇದನ್ನೂ ಓದಿ:ಐಪಿಎಲ್ನಲ್ಲಿ ಹೆಚ್ಚು ಬಾರಿ 200 ರನ್.. ಆರ್ಸಿಬಿ ದಾಖಲೆ ಸರಿಗಟ್ಟಿದ ಸಿಎಸ್ಕೆ..