ಅಬುಧಾಬಿ: ಇಂದು ಮಧ್ಯಾಹ್ನ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಡಲಿವೆ.
ಈಗಾಗಲೇ 5 ಪಂದ್ಯಗಳನ್ನು ಕೈಚೆಲ್ಲಿರುವ ಪಂಜಾಬ್ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಬರಿ ಗೆಲುವಷ್ಟೇ ಅಲ್ಲ, ಉತ್ತಮ ರನ್ರೇಟ್ ಕೂಡ ಪಂಜಾಬ್ಗೆ ಅವಶ್ಯವಾಗಿದೆ. ಟಿ-20 ಸ್ಟಾರ್ ಬ್ಯಾಟ್ಸ್ಮನ್ಗಳಿದ್ದರೂ ಪಂಜಾಬ್ ಅದೃಷ್ಠ ಸರಿ ಇದ್ದಂತೆ ಕಾಣುತ್ತಿಲ್ಲ. ಬ್ಯಾಟ್ಸ್ಮನ್ಗಳ ವೈಫಲ್ಯ ತಂಡಕ್ಕೆ ದೊಡ್ಡ ಹೊಡೆತವಾಗಿದೆ.
ಕಳೆದ ಪಂದ್ಯದಲ್ಲಿ ನಿಕೋಲಸ್ ಪೂರನ್ ಹೊರತುಪಡಿಸಿ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಮಿಂಚಲಿಲ್ಲ. ಟೂರ್ನಿ ಆರಂಭವಾದಾಗಿನಿಂದ ಮ್ಯಾಕ್ಸ್ವೆಲ್ ಸಿಡಿಯದಿರುವುದು ತಂಡಕ್ಕೆ ತಲೆನೋವಾಗಿದೆ. ಇತ್ತ ಬೌಲಿಂಗ್ನಲ್ಲೂ ರಾಹುಲ್ ಹುಡುಗರು ಎಡವುತ್ತಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 15 ಓವರ್ಗಳವರೆಗೆ ಒಂದೇ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಪಂದ್ಯದ ಅಂತ್ಯದಲ್ಲಿ ಸ್ಪಿನ್ನರ್ ರವಿ ಬಿಶ್ನೋಯಿ 3 ವಿಕೆಟ್ ಪಡೆದು ಮಿಂಚಿದ್ದರು.
ಇತ್ತ ಕೆಕೆಆರ್ ತಂಡ ಆಡಿದ 5 ಪಂದ್ಯಗಳ ಪೈಕಿ 3ರಲ್ಲಿ ಜಯ ಸಾಧಿಸಿದ್ದು ಉತ್ತಮ ಪ್ರದರ್ಶನ ತೋರಿದೆ. ಕಳೆದ ಪಂದ್ಯದಲ್ಲಿ ಕಡಿಮೆ ರನ್ ಗಳಿಸಿದ್ರೂ ಬಲಿಷ್ಠ ಸಿಎಸ್ಕೆ ತಂಡವನ್ನು ಕಡಿಮೆ ರನ್ಗಳಿಗೆ ಕಟ್ಟಿಹಾಕಿ ಜಯ ಸಾಧಿಸಿದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಮೊದಲ ಬಾರಿ ಆರಂಭಿಕನಾಗಿ ಕಣಕ್ಕಿಳಿದ ರಾಹುಲ್ ತ್ರಿಪಾಠಿ ಅಮೋಘ ಪ್ರದರ್ಶನ ತೋರಿದರು. ಶುಬ್ಮನ್ ಗಿಲ್, ಮಾರ್ಗನ್, ನಿತೀಶ್ ರಾಣಾ ಉತ್ತಮ ಲಯದಲ್ಲಿದ್ದಾರೆ. ಆದರೆ ರಸೆಲ್ ಮಾತ್ರ ಬ್ಯಾಟಿಂಗ್ನಲ್ಲಿ ಮಿಂಚುತ್ತಿಲ್ಲ. ಬೌಲಿಂಗ್‌ನಲ್ಲಿ ಕಮಾಲ್ ಮಾಡಿದ್ದ ಕಮಲೇಶ್ ನಾಗರ್‌ಕೋಟಿ, ಶಿವಂ ಮಾವಿ, ವರುಣ್ ಚರ್ಕವರ್ತಿ ಮೇಲೆ ಇಂದು ತಂಡ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ.
ಉಭಯ ತಂಡಗಳು ಇಲ್ಲಿಯವರೆಗೆ 25 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 8 ಪಂದ್ಯಗಳಲ್ಲಿ ಪಂಜಾಬ್ ಗೆಲುವು ಸಾಧಿಸಿದ್ರೆ, 17 ಪಂದ್ಯಗಲ್ಲಿ ಕೆಕೆಆರ್ ಗೆಲುವಿನ ನಗೆ ಬೀರಿದೆ.