ಅಬುಧಾಬಿ: ಮುಂಬೈ ಇಂಡಿಯನ್ಸ್ ತಂಡದ ಯುವ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ತಮ್ಮ ಮಿಂಚಿನ ಬೌಲಿಂಗ್ನ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಬ್ಯಾಟ್ಸ್‌ಮನ್‌ಗಳ ಮೇಲೆ ಒಂದು ರೀತಿಯ ಜಾದು ಬೌಲಿಂಗ್ ಮಾಡುವ ಚಹರ್, ಉತ್ತಮ ಫಾರ್ಮ್ನಲ್ಲಿರುವುಕ್ಕೆ ಕಾರಣವನ್ನು ತಿಳಿಸಿದ್ದಾರೆ.
ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಹರ್, ವಿಕೆಟ್ಗಳನ್ನು ಪಡೆಯಲು ಬ್ಯಾಟ್ಸ್‌ಮನ್‌ಗಳ ಮೇಲೆ ಹೇಗೆಲ್ಲ ದಾಳಿ ಮಾಡಬೇಕೆಂಬುದನ್ನು ಮುಂಬೈ ಇಂಡಿಯನ್ಸ್ ಫ್ರ್ಯಾಂಚೈಸಿಯ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಜಹೀರ್ ಖಾನ್ ನನಗೆ ಮಾರ್ಗದರ್ಶನ ಮಾಡುತ್ತಾರೆ. ಜಹೀರ್ ಭಯ್ಯಾ ನನ್ನ ಬೌಲಿಂಗ್ ಮಾದರಿ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ನಾನು ಯಾವಾಗಲೂ ಅವರ ಸಲಹೆ ಕೇಳುತ್ತಿರುತ್ತೇನೆ ಎಂದಿದ್ದಾರೆ.
ನನಗೇ ಏನೆ ಸಮಸ್ಯೆ ಕಂಡು ಬಂದರೂ ನಾನು ಜಹೀರ್ ಭಯ್ಯಾ ಅವರನ್ನು ಸಂಪರ್ಕಿಸುತ್ತೇನೆ. ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಯಾವ ರೀತಿಯ ತಂತ್ರಗಾರಿಕೆಯ ಬೌಲಿಂಗ್ ಮಾಡಬೇಕು ಎಂಬುದನ್ನು ಅವರು ತಿಳಿಸಿಕೊಡುತ್ತಾರೆ. ನಾವಿಬ್ಬರೂ ಬೌಲಿಂಗ್ ಬಗ್ಗೆ ಮಾತನಾಡಲು ಕುಳಿತರೆ ಕೆಲವೊಮ್ಮೆ ಗಂಟೆಗಟ್ಟಲೇ ಮಾತನಾಡುತ್ತಲೇ ಇರುತ್ತೇವೆ. ಜಹೀರ್ ಭಯ್ಯಾ ನನ್ನನ್ನು ಮತ್ತು ನನ್ನ ಬೌಲಿಂಗ್ ಅನ್ನು ಅರ್ಥ ಮಾಡಿಕೊಂಡಿದ್ದಾರೆ. ಯಾವುದೇ ಸಲಹೆಯಾದರೂ ನಾನು ಅವರಿಂದ ಪಡೆಯುತ್ತೇನೆ ಎಂದು ಭಾರತದ ಮಾಜಿ ವೇಗಿ ಜಹೀರ್ ಖಾನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಐಪಿಎಲ್ 2020 ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಪ್ರಸ್ತುತ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆರು ಪಂದ್ಯವನ್ನು ತಮ್ಮದಾಗಿಸಿಕೊಂಡ ರೋಹಿತ್ ಶರ್ಮಾ ನೇತೃತ್ವದ ತಂಡ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಮವಾಗಿ ಒಂದು ಹಾಗೂ ಎರಡನೇ ಸ್ಥಾನದಲ್ಲಿವೆ. ಮುಂಬೈ ಇಂದು ಸಿಎಸ್ಕೆ ವಿರುದ್ಧ ಸೆಣಸಲಿದೆ.
ಟೂರ್ನಿಯಲ್ಲಿ ಚಹರ್ ಆಡಿದ ಒಂಬತ್ತು ಪಂದ್ಯದಲ್ಲಿ ಇದುವರೆಗೆ 11 ವಿಕೆಟ್ ಗಳಿಸಿದ್ದಾರೆ.