ದುಬೈ: ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯ ವೇಳೆ 18ನೇ ಓವರ್ನಲ್ಲಿ ಬೌಲಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ನವದೀಪ್ ಸೈನಿ ಗಾಯಗೊಂಡಿದ್ದಾರೆ.
18 ನೇ ಓವರ್‌ನ ಕೊನೆಯ ಎಸೆತದಲ್ಲಿ ಸೈನಿ ತನ್ನ ಬಲಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡು ಮೈದಾನದಿಂದ ಹೊರನಡೆದರು. ಸೈನಿ ಯಾವಾಗ ಗುಣಮುಖರಾಗುತ್ತಾರೆ ಎಂಬುದು ಖಚಿತವಾಗಿಲ್ಲ ಅಂತಾ ತಂಡದ ಫಿಸಿಯೋ ಹೇಳಿದ್ದಾರೆ.
"ಸೈನಿ ಕೊನೆಯ ಎಸೆತದಲ್ಲಿ ತನ್ನ ಬೌಲಿಂಗ್ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಅದೃಷ್ಟವಶಾತ್, ನಾವು ಉತ್ತಮ ಶಸ್ತ್ರಚಿಕಿತ್ಸಕನನ್ನು ಹೊಂದಿದ್ದೇವೆ. ಕೈಗೆ ಸ್ಟಿಚ್ ಮಾಡಲಾಗಿದೆ. ರಾತ್ರಿಯಿಡೀ ಮೇಲ್ವಿಚಾರಣೆ ಮಾಡಿ ಮತ್ತು ಮುಂದಿನ ಆಟಕ್ಕೆ ಸಿದ್ಧವಾದ ನಂತರ ಅದನ್ನು ಪರಿಶೀಲಿಸಲಾಗುವುದು" ಎಂದು ಫಿಸಿಯೋ, ಇವಾನ್ ಸ್ಪೀಚ್ಲಿ ಹೇಳಿದ್ದಾರೆ.
![Saini injured his right-hand thumb](https://etvbharatimages.akamaized.net/etvbharat/prod-images/9314704_thu.jpg)
"ವಿರಾಟ್ ನಾಲ್ಕೈದು ವರ್ಷಗಳ ಹಿಂದೆ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಇಂತಹದ್ದೇ ಗಾಯಕ್ಕೆ ತುತ್ತಾಗಿದ್ದರು. ನಾವು ರಕ್ತಸ್ರಾವವನ್ನು ನಿಲ್ಲಿಸಿ, ಗಾಯಕ್ಕೆ ಹೊಲಿಗೆ ಹಾಕಿದ ಬಳಿಕ ಮುಂದಿನ ಪಂದ್ಯದಲ್ಲೇ ಅವರು ಶತಕ ಸಿಡಿಸಿದ್ದರು. ಎರಡು ಗಾಯಗಳನ್ನು ಹೋಲಿಸಲಾಗುವುದಿಲ್ಲ. ಕೆಲವು ಜನರು ಬೇಗ ಚೇತರಿಸಿಕೊಂಡರೆ ಕೆಲವರಿಗೆ ಸಮಯ ಬೇಕಾಗುತ್ತದೆ. ಸೈನಿ ಅವರ ಬೌಲಿಂಗ್ ಕೈಗೆ ಗಾಯ ಆಗಿರುವುದರಿಂದ ಅವರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಆದ್ದರಿಂದ ಅವರು ಯಾವಾಗ ಗುಣಮುಖರಾಗುತ್ತಾರೆ ಎಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ" ಎಂದಿದ್ದಾರೆ.