ಕೊಲಂಬೊ: ರಾಷ್ಟ್ರೀಯ ತಂಡಕ್ಕೆ ಪೂರ್ಣ ಪ್ರಮಾಣದ ಕೋಚ್ ಹುದ್ದೆ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ನಾನು ಯೋಚಿಸಿಯೇ ಇಲ್ಲ ಎಂದು ಶ್ರೀಲಂಕಾ ಸರಣಿಗೆ ಭಾರತೀಯ ತಂಡದ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದ ಬ್ಯಾಟಿಂಗ್ ದಿಗ್ಗಜ, ಕನ್ನಡಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ನಾನು ಈ ಹೊಸ ಅನುಭವವನ್ನು ಆನಂದಿಸಿದ್ದೇನೆ. ನಮ್ಮ ಹುಡುಗರೊಂದಿಗೆ ಕೆಲಸ ಮಾಡುವುದನ್ನು ನಾನು ಇಷ್ಟಪಟ್ಟೆ. ಇದು ಅದ್ಭುತವಾಗಿತ್ತು. ಆದರೆ, ನಾನು ಭಾರತ ತಂಡದ ಪೂರ್ಣ ಪ್ರಮಾಣದ ಕೋಚ್ ಆಗುವ ಬಗ್ಗೆ ಯೋಚಿಸಿಲ್ಲ ಎಂದು ಪಂದ್ಯ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ದ್ರಾವಿಡ್ ಹೇಳಿದ್ದಾರೆ.
ಪ್ರಾಮಾಣಿಕವಾಗಿ ಹೇಳುವುದಾದರೆ ನನ್ನ ತಂಡಕ್ಕೆ ಮಾರ್ಗದರ್ಶನ ನೀಡುವುದೆಂದರೆ ನನಗೆ ಖುಷಿ ತಂದಿದೆ. ನಾನು ಈ ಪ್ರವಾಸದ ಹೊರತಾಗಿ ಯಾವುದೇ ಆಲೋಚನೆ ಮಾಡಿಲ್ಲ ಎಂದು ದ್ರಾವಿಡ್ ಇದೇ ವೇಳೆ ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಿರ್ದೇಶಕರಾಗಿರುವ ದ್ರಾವಿಡ್ ಅವರು, ಭಾರತದ ಅಂಡರ್ -19 ತಂಡ ಮತ್ತು ಇಂಡಿಯಾ ಎ ತಂಡಗಳಿಗೆ ಯಶಸ್ವಿ ಮಾರ್ಗದರ್ಶಕರಾಗಿ ಮತ್ತು ತರಬೇತುದಾರರಾಗಿ ಕೆಲಸ ಮಾಡಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿ ಭಾರತ ಹಿರಿಯ ತಂಡದ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ಮೊದಲ ನಿಯೋಜನೆಗೊಂಡಿದ್ದರು. ಅವರ ಮಾರ್ಗದರ್ಶನದ ಅಡಿ ಶಿಖರ್ ಧವನ್ ನೇತೃತ್ವದ ತಂಡವು ಏಕದಿನ ಸರಣಿಯನ್ನು 2-1ರಿಂದ ಗೆದ್ದುಕೊಂಡಿತು. ಆದರೆ ಟಿ-20 ಸರಣಿ 1-2 ಸೋಲನ್ನಪ್ಪುವ ಮೂಲಕ ಕಳೆದುಕೊಂಡಿತು. 48 ವರ್ಷದ ದ್ರಾವಿಡ್ 164 ಟೆಸ್ಟ್ ಮತ್ತು 344 ಏಕದಿನ ಪಂದ್ಯಗಳನ್ನು ಆಡಿದ್ದಾರೆ.