ಲಂಡನ್: ಗಾಯದಿಂದ ಚೇತರಿಸಿಕೊಂಡು ಕೌಂಟಿ ಕ್ರಿಕೆಟ್ನಲ್ಲಿ ಪಾಲ್ಗೊಂಡಿದ್ದ ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ಗೆ ಮತ್ತೊಮ್ಮೆ ಮೊಣಕೈ ನೋವು ಕಾಣಿಸಿಕೊಂಡಿದೆ. ಹಾಗಾಗಿ, ಜೂನ್ ಮೊದಲ ವಾರದಲ್ಲಿ ನಡೆಯಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಇವರನ್ನು ಕೈಬಿಡಲಾಗಿದೆ ಎಂದು ಇಸಿಬಿ ತಿಳಿಸಿದೆ.
ಸಸೆಕ್ಸ್ ಪರ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಕೆಂಟ್ ವಿರುದ್ಧ ಆಡುವಾಗ ದೀರ್ಘಕಾಲ ಕಾಡಿದ್ದ ಮೊಣಕೈ ನೋವು ಅವರಿಗೆ ಮತ್ತೆ ಕಾಣಿಸಿಕೊಂಡಿದೆ. 26 ವರ್ಷದ ಈ ವೇಗಿ ಭಾರತದ ವಿರುದ್ಧ ಸರಣಿಯಲ್ಲಿ ಪಾಲ್ಗೊಂಡಿದ್ದ ವೇಳೆ ಹಳೆಯ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊನೆಯ 2 ಪಂದ್ಯಗಳಿಂದ ಹೊರಬಿದ್ದಿದ್ದರು. ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಐಪಿಎಲ್ನಲ್ಲೂ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ.
ಆರ್ಚರ್ ಅವರು ಕೌಂಟಿ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 29 ರನ್ಗಳಿಗೆ 2 ವಿಕೆಟ್ ಪಡೆದು ಮಿಂಚಿದ್ದರು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 5 ಓವರ್ ಮಾತ್ರ ಬೌಲಿಂಗ್ ಮಾಡಿ, ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದರು.
ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಜೂನ್ 2 ರಂದು ಲಾರ್ಡ್ಸ್ ಮೈದಾನದಲ್ಲಿ ಆರಂಭವಾಗಲಿದೆ.