ಗಯಾನ (ವೆಸ್ಟ್ ಇಂಡೀಸ್): ತಿಲಕ್ ವರ್ಮಾ ಅವರ (51 ರನ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಈ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ 153 ರನ್ಗಳ ಸಾಧಾರಣ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರರಾದ ಇಶನ್ ಕಿಶನ್ ಮತ್ತು ಶುಭ್ಮನ್ ಗಿಲ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ಇಶನ್ ಕಿಶನ್ 2 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 27 ರನ್ ಗಳಿಸಿ ರೊಮಾರಿಯೋ ಶೆಫರ್ಡ್ಗೆ ವಿಕೆಟ್ ಒಪ್ಪಿಸಿದರೆ, ಶುಭ್ಮನ್ ಗಿಲ್ ಕೇವಲ 7 ರನ್ ಗಳಿಸಿ ಅಲ್ಜಾರಿ ಜೋಸೆಫ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸ್ಟಾರ್ ಬ್ಯಾಟರ್ ಸೂರ್ಯ ಕುಮಾರ್ 1 ರನ್ ಗಳಿಸಿ ರನೌಟ್ ಆಗಿ ನಿರಾಸೆ ಮೂಡಿಸಿದರು.
ನಂತರ ಬ್ಯಾಟ್ ಬೀಸಿದ ತಿಲಕ್ ವರ್ಮಾ ಜವಾಬ್ದಾರಿಯುತ ಆಟ ಆಡಿ 1 ಸಿಕ್ಸರ್ ಮತ್ತು 5 ಬೌಂಡರಿಗಳೊಂದಿಗೆ ಅರ್ಧ ಶತಕ ಗಳಿಸಿದರು. 51 ರನ್ ಗಳಿಸಿದ್ದಾಗ ಅಕೀಲ್ ಹುಸೇನ್ ಎಸೆತದಲ್ಲಿ ಮೆಕ್ಕಾಯ್ಗೆ ಕ್ಯಾಚಿತ್ತು ಪೆವಿಲಿಯನ್ ಪರೇಡ್ ನಡೆಸಿದರು.ಬಳಿಕ ಬಂದ ಸಂಜು ಸಾಮ್ಸನ್ 7 ರನ್, ನಾಯಕ ಹಾರ್ದಿಕ್ ಪಾಂಡ್ಯ 24 ರನ್, ಅಕ್ಷರ್ ಪಟೇಲ್ 14 ರನ್, ರವಿ ಬಿಷ್ನೋಯಿ 8 ರನ್, ಹರ್ಷದೀಪ್ 6 ರನ್ ಗಳಿಸಿದರು. 20 ಓವರ್ ಅಂತ್ಯಕ್ಕೆ ಭಾರತ ತಂಡವು 7 ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಯಿತು. ವೆಸ್ಟ್ ಇಂಡೀಸ್ ಪರ ಅಕೀಲ್ ಹುಸೇನ್ 29/2, ಅಲ್ ಝಾರಿ ಜೋಸೆಫ್ 28/2, ರೊಮಾರಿಯೋ ಶೆಫರ್ಡ್ 28/2 ವಿಕೆಟ್ ಗಳಿಸಿದರು.
ಇದೀಗ ವೆಸ್ಟ್ ಇಂಡೀಸ್ ಆಟ ಮುಂದುವರೆಸಿದ್ದು, 11 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿದೆ. ವೆಸ್ಟ್ ಇಂಡೀಸ್ ಪರ ನಿಕೋಲಸ್ ಪೂರನ್ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ 4 ರನ್ಗಳಿಂದ ಸೋಲು ಕಂಡಿತ್ತು. ಈ ಮೂಲಕ ವೆಸ್ಟ್ ಇಂಡೀಸ್ ಸರಣಿಯಲ್ಲಿ ಶುಭಾರಂಭ ಮಾಡಿತ್ತು.
ಇದನ್ನೂ ಓದಿ : ODI World Cup: ಏಕದಿನ ವಿಶ್ವಕಪ್: ಭಾರತಕ್ಕೆ ಕ್ರಿಕೆಟ್ ತಂಡ ಕಳುಹಿಸಲು ಒಪ್ಪಿಗೆ ನೀಡಿದ ಪಾಕ್ ಸರ್ಕಾರ