ರಾಂಚಿ: ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಶ್ರೇಯಸ್ ಅಯ್ಯರ್ ಅಜೇಯ ಶತಕ(113) ಹಾಗೂ ಇಶಾನ್ ಕಿಶನ್ ಅವರ ಅಬ್ಬರದ 93 ರನ್ಗಳ ನೆರವಿನಿಂದ ಭಾರತ ತಂಡವು ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಸೋಲುಣಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ನಡೆಸಿತು. ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಐಡೆನ್ ಮಾರ್ಕ್ರಮ್( 79) ಮತ್ತು ರೀಜಾ ಹೆಂಡ್ರಿಕ್ಸ್(74) ಅವರ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 278 ಪೇರಿಸಿತ್ತು.
279 ರನ್ಗಳ ಗುರಿಯನ್ನು ಟೀಂ ಇಂಡಿಯಾ 45.5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ತಲುಪುವ ಮೂಲಕ ಗೆಲುವಿನ ನಗೆ ಬೀರಿದೆ. ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 48 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಆರಂಭಿಕರಾದ ನಾಯಕ ಶಿಖರ್ ಧವನ್ 13 ಹಾಗೂ ಶುಭ್ಮನ್ ಗಿಲ್ 28 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದರು.
ಆಗ ಒಂದಾದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಜೋಡಿ ಮೂರನೇ ವಿಕೆಟ್ಗೆ 161 ರನ್ ಜೊತೆಯಾಟವಾಡಿದರು. ಹರಿಣಗಳ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಇಬ್ಬರೂ ಬ್ಯಾಟರ್ಗಳು ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 84 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 93 ರನ್ ಬಾರಿಸಿದ ಕಿಶನ್ 7 ರನ್ ಅಂತರದಲ್ಲಿ ಶತಕ ವಂಚಿತರಾದರು. ಫೋರ್ಟಿನ್ ಬೌಲಿಂಗ್ನಲ್ಲಿ ಹೆಂಡ್ರಿಕ್ಸ್ಗೆ ಕ್ಯಾಚ್ ನೀಡಿ ನಿರಾಸೆ ಅನುಭವಿಸಿದರು.
ಇನ್ನೊಂದೆಡೆ ಅಜೇಯ ಆಟವಾಡಿದ ಶ್ರೇಯಸ್ ಅಯ್ಯರ್(113) ಭರ್ಜರಿ ಶತಕ ದಾಖಲಿಸಿ ಸಂಭ್ರಮಿಸಿದರು. ನೋಕಿಯಾ ಎಸೆತವನ್ನು ಬೌಂಡರಿಗೆ ಅಟ್ಟುವ ಮುಖಾಂತರ ತಂಡವನ್ನು ಗೆಲುವಿನ ದಡ ಸೇರಿಸಿದರು. ಸಂಜು ಸ್ಯಾಮ್ಸನ್ 30 ರನ್ ಬಾರಿಸಿ ಅಜೇಯರಾಗುಳಿದರು. ಭಾರತದ ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿ ಸಮಬಲಗೊಂಡಿದೆ. ಅಂತಿಮ ಪಂದ್ಯವು ಅ.11ರಂದು ದೆಹಲಿಯಲ್ಲಿ ನಡೆಯಲಿದ್ದು, ಅಲ್ಲಿ ಗೆದ್ದ ತಂಡವು ಸರಣಿ ತನ್ನದಾಗಿಸಿಕೊಳ್ಳಲಿದೆ.
ಇದನ್ನೂ ಓದಿ: Ind Vs Sa 2nd Odi : ಶಹಬಾಜ್ ಅಹ್ಮದ್ ಚೊಚ್ಚಲ ವಿಕೆಟ್ ಸಂಭ್ರಮ.. ನೋಡಿ