ಪುಣೆ (ಮಹಾರಾಷ್ಟ್ರ): ಸೆಮಿಫೈನಲ್‌ಗೆ ಲಗ್ಗೆ ಇಟ್ಟಿರುವ ಆತ್ಮವಿಶ್ವಾಸದಲ್ಲಿರುವ ಆಸ್ಟ್ರೇಲಿಯಾ ತಂಡ ಇಂದು ನಡೆಯಲಿರುವ ವಿಶ್ವಕಪ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಇಲ್ಲದ ಬಾಂಗ್ಲಾದೇಶದ ವಿರುದ್ಧ ಇದೇ ವೇಗವನ್ನು ಕಾಯ್ದುಕೊಳ್ಳಲು ಮುಂದಾಗಿದೆ.
ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಅದ್ಭುತ ಪ್ರದರ್ಶನ ನೀಡಿ ಕಳೆದ ಆರು ಪಂದ್ಯಗಳನ್ನು ಗೆದ್ದಿದೆ. ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಬಾಂಗ್ಲಾದೇಶ. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅಜೇಯ ದ್ವಿಶತಕದ ಹಿನ್ನೆಲೆಯಲ್ಲಿ ಪ್ಯಾಟ್ ಕಮಿನ್ಸ್ ತಂಡ ಅಫ್ಘಾನಿಸ್ತಾನ ವಿರುದ್ಧ ಅದ್ಭುತ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಗೆಲ್ಲಲು 292 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 91 ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಂತರ ಮ್ಯಾಕ್ಸ್‌ವೆಲ್ ಗಾಯಗೊಂಡು 128 ಎಸೆತಗಳಲ್ಲಿ ಅಜೇಯ 201 ರನ್ ಗಳಿಸಿದ್ದು, ದಾಖಲೆ ಆಗಿದೆ.
MCA ಸ್ಟೇಡಿಯಂ ಪಿಚ್ ವರದಿ: ಇಂದು ಬೆಳಗ್ಗೆ 10.30ಕ್ಕೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬಾಂಗ್ಲಾ ಮತ್ತು ಆಸೀಸ್ ನಡುವೆ ಪಂದ್ಯ ಆರಂಭಗೊಳ್ಳಲಿದೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ 5 ವಿಶ್ವಕಪ್ 2023 ಪಂದ್ಯಗಳನ್ನು ಆಡಲು ಕಪ್ಪು ಮಣ್ಣನ್ನು ಬಳಸಿ ಸಿದ್ಧಪಡಿಸಲಾದ 11 ಪಿಚ್‌ಗಳಲ್ಲಿ ನಾಲ್ಕನ್ನು ಐಸಿಸಿ ಆಯ್ಕೆ ಮಾಡಿದೆ. ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಬಳಸಲಾದ ಪಿಚ್‌ನಲ್ಲಿ ಭಾರತವು ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಯಿತು. ಆದರೆ ಆರಂಭಿಕರ ಉತ್ತಮ ಆರಂಭದ ಹೊರತಾಗಿಯೂ ಬಾಂಗ್ಲಾದೇಶ ಸವಾಲಿನ ಸ್ಕೋರ್ ದಾಖಲಿಸಲು ಹೆಣಗಾಡಿತು. ಭಾರತೀಯ ಬೌಲಿಂಗ್ ಮಧ್ಯಮ ಓವರ್‌ಗಳಲ್ಲಿ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿತು ಮತ್ತು ಡೆತ್ ಓವರ್‌ಗಳ ಹೆಚ್ಚಿನ ಭಾಗವನ್ನು ಸಹ ನಿಯಂತ್ರಿಸಿತು. ನೋಡಿದರೆ ಇಲ್ಲಿ ಯಾವುದೇ ತಂಡ ಟಾಸ್ ಗೆದ್ದ ನಂತರ ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತದೆ. ಆದ್ರೆ ಟಾಸ್ ಆಸ್ಟ್ರೇಲಿಯಾ ತಂಡಕ್ಕೆ ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ. ಟಾಸ್ ಪ್ರಕ್ರಿಯೆ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಬಾಂಗ್ಲಾದೇಶಕ್ಕೆ ಕಾಡುತ್ತಿದೆ ಭಯ: ಬಾಂಗ್ಲಾದೇಶವು 2025 ರ ಚಾಂಪಿಯನ್ಸ್ ಟ್ರೋಫಿ ಅರ್ಹತೆಯ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದ್ದು, ಶ್ರೀಲಂಕಾವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿತು. ಆತಿಥೇಯ ಪಾಕಿಸ್ತಾನ ಸೇರಿದಂತೆ ಎಂಟು ಪ್ರಮುಖ ತಂಡಗಳು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಆಡಲಿವೆ. ಬಾಂಗ್ಲಾದೇಶ ಎಂಟನೇ ಸ್ಥಾನದಲ್ಲಿದ್ದು, ಆ ಸ್ಥಾನವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ನಾಯಕ ಶಕೀಬ್ ಕಳೆದ ಪಂದ್ಯದಲ್ಲಿ ಎರಡು ವಿಕೆಟ್ ಪಡೆದು 65 ಎಸೆತಗಳಲ್ಲಿ 82 ರನ್ ಗಳಿಸಿದ್ದರು. ಆದರೆ ಮ್ಯಾಥ್ಯೂಸ್ ಟೈಮ್ ಔಟಾದಿರುವುದು ಅವರ ಕ್ರೀಡಾ ಮನೋಭಾವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಶಕೀಬ್ ಅವರ ಎಡಗೈ ಹೆಬ್ಬೆರಳು ಮೂಳೆ ಮುರಿತದಿಂದಾಗಿ ಕೊನೆಯ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ.
ನಜ್ಮುಲ್ ಹುಸೇನ್ ಶಾಂಟೊ ನಾಯಕ: ಅನಾಮುಲ್ ಹಕ್ ಅವರನ್ನು ಕೊನೆಯ ಪಂದ್ಯಕ್ಕೆ ಕರೆಯಲಾಗಿದೆ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಕಡಿವಾಣ ಹಾಕುವ ಸವಾಲು ಹೊಂದಿರುವ ಈ ಪಂದ್ಯದ ನಾಯಕತ್ವವನ್ನು ನಜ್ಮುಲ್ ಹುಸೇನ್ ಶಾಂಟೊ ವಹಿಸಲಿದ್ದಾರೆ. ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಎಂಟು ಇನ್ನಿಂಗ್ಸ್‌ಗಳಲ್ಲಿ 446 ರನ್ ಗಳಿಸಿದ್ದಾರೆ ಮತ್ತು ಆರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಮ್ಯಾಕ್ಸ್‌ವೆಲ್ 397 ರನ್ ಗಳಿಸಿದ್ದಾರೆ. ಇದು ಏಕದಿನ ವಿಶ್ವಕಪ್‌ನಲ್ಲಿ ವೇಗದ ಶತಕ ಮತ್ತು ದ್ವಿಶತಕವನ್ನು ಒಳಗೊಂಡಿದೆ. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ವಾಪಸಾತಿಯಲ್ಲಿ ಶತಕ ಬಾರಿಸಿದರೆ, ಮಿಚೆಲ್ ಮಾರ್ಷ್ ಅರ್ಧಶತಕ ಮತ್ತು ಶತಕ ಗಳಿಸಿದ್ದಾರೆ. ಆದರೆ ಮಧ್ಯಮ ಕ್ರಮಾಂಕ ನಿರೀಕ್ಷಿತವಾಗಿ ಆಡಿರಲಿಲ್ಲ.
ಆಸೀಸ್ ಮಧ್ಯಮ ಕ್ರಮಾಂಕದ ಮೇಲೆ ಬಾಂಗ್ಲಾ ನಿಗಾ: ಬಾಂಗ್ಲಾದೇಶದ ಬೌಲರ್‌ಗಳು ಈ ದೌರ್ಬಲ್ಯದ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಬಾಂಗ್ಲಾದೇಶದ ಬೌಲಿಂಗ್ ಜವಾಬ್ದಾರಿ ಶರೀಫುಲ್ ಇಸ್ಲಾಂ ಮತ್ತು ಮೆಹದಿ ಹಸನ್ ಮಿರಾಜ್ ಅವರ ಮೇಲಿದೆ. ಕಳೆದ ಪಂದ್ಯದಲ್ಲಿ ಯುವ ಆಟಗಾರ ತಂಜಿಮ್ ಹಸನ್ ಶಕೀಬ್ ಮೂರು ವಿಕೆಟ್ ಪಡೆದಿದ್ದರು. ಆದರೆ ಹತ್ತು ಓವರ್‌ಗಳಲ್ಲಿ 80 ರನ್ ನೀಡಿದ್ದರು. ಬ್ಯಾಟ್ಸ್‌ಮನ್‌ಗಳಲ್ಲಿ ಲಿಟನ್ ದಾಸ್ ಮತ್ತು ಶಾಂಟೊ ಉತ್ತಮ ಆರಂಭವನ್ನು ಪಡೆಯುವ ನಿರೀಕ್ಷೆಯಲ್ಲಿದ್ದರೆ, ಮಹಮ್ಮದುಲ್ಲಾ ಮತ್ತು ಮುಶ್ಫಿಕರ್ ರಹೀಮ್ ಕೆಳ ಕ್ರಮಾಂಕದಲ್ಲಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಆದ್ರೂ ಅವರು ಇಲ್ಲಿಯವರೆಗೆ 20 ವಿಕೆಟ್‌ಗಳನ್ನು ಪಡೆದಿರುವ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ಆಡಮ್ ಝಂಪಾ ಅವರನ್ನು ಎದುರಿಸುತ್ತಾರೆ. ಬಾಂಗ್ಲಾದೇಶ ವಿರುದ್ಧ 21 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ 19-1 ದಾಖಲೆ ಹೊಂದಿದೆ.
ಓದಿ: ರೋಹಿತ್ ಶರ್ಮಾಗೆ ಟೀಮ್ ಇಂಡಿಯಾ ನಾಯಕತ್ವ ವಹಿಸಿಕೊಳ್ಳಲು ಆಸಕ್ತಿ ಹೊಂದಿರಲಿಲ್ಲ: ಸೌರವ್ ಗಂಗೂಲಿ