ಮುಂಬೈ: ಬುಧವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊನೆಯ 4 ಎಸೆತಗಳಲ್ಲಿ 3 ಸಿಕ್ಸರ್ ಸಿಡಿಸುವ ಮೂಲಕ ರಶೀದ್ ಖಾನ್ 22 ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಲು ಗುಜರಾತ್ ಟೈಟನ್ಸ್ಗೆ ನೆರವಾಗಿದ್ದರು. ಈ ಕುರಿತು ಮಾತನಾಡಿದ ಅಫ್ಘಾನ್ ಸ್ಟಾರ್, ಇಂತಹ ಪ್ರದರ್ಶನವನ್ನು ಕಾರ್ಯಗತಗೊಳಿಸುವುದರ ಬಗ್ಗೆ ನನಗೆ ಆತ್ಮವಿಶ್ವಾಸವಿತ್ತು ಎಂದರು.
ತಮ್ಮ ಲೆಗ್ ಸ್ಪಿನ್ ಬೌಲಿಂಗ್ನಿಂದ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ದಾಖಲೆ ಹೊಂದಿರುವ ರಶೀದ್ ಖಾನ್, ನಿನ್ನೆಯ ಪಂದ್ಯದಲ್ಲಿ ಬೌಲಿಂಗ್ನಲ್ಲಿ ವಿಫಲರಾದರು. ಆದರೆ ಬ್ಯಾಟಿಂಗ್ನಲ್ಲಿ ಕೇವಲ 11 ಎಸೆತಗಳಲ್ಲಿ ಅಜೇಯ 31 ರನ್ಗಳಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. ಅದರಲ್ಲೂ ಕೊನೆಯ 4 ಎಸೆತಗಳಲ್ಲಿ 15 ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಮಾರ್ಕೊ ಜಾನ್ಸನ್ ಎಸೆತಗಳಿಗೆ 3 ಸಿಕ್ಸರ್ ಸಿಡಿಸಿ ಗುಜರಾತ್ ಟೈಟನ್ಸ್ಗೆ 5 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು. ಇವರಿಗೆ ಸಾಥ್ ನೀಡಿದ ತೆವಾಟಿಯಾ 21 ಎಸೆತಗಳಲ್ಲಿ ಅಜೇಯ 40 ರನ್ಗಳಿಸಿದರು.
'ಈ ಅನುಭವ ಅದ್ಭುತ. ಪಂದ್ಯವನ್ನು ಫಿನಿಶ್ ಮಾಡಬೇಕೆಂದು ಮನಸಿನಲ್ಲಿಟ್ಟುಕೊಂಡು ಅಲ್ಲಿಗೆ ಹೋಗಿದ್ದೆ. ನನ್ನ ಬಲ ಬಳಸಿ ಹೊಡೆದೆ. ಇದನ್ನು ಸನ್ರೈಸರ್ಸ್ ವಿರುದ್ಧ ಮಾಡಿರುವುದಕ್ಕೆ ನನಗೆ ಖುಷಿಯಿದೆ. ಕಳೆದ 2 ವರ್ಷಗಳಿಂದ ಬ್ಯಾಟಿಂಗ್ ಮೇಲೆ ಸಾಕಷ್ಟು ಶ್ರಮಿಸುತ್ತಿದ್ದೇನೆ. ಹಾಗಾಗಿ ಈ ಪಂದ್ಯದಲ್ಲಿ ಫಿನಿಶ್ ಮಾಡಬಲ್ಲೆ ಎಂಬ ವಿಶ್ವಾಸವಿತ್ತು' ಎಂದು ತಮ್ಮ ಸಾಹಸ ಪ್ರದರ್ಶನದ ಬಗ್ಗೆ ಪಂದ್ಯ ಮುಗಿದ ನಂತರ ರಶೀದ್ ಮಾತನಾಡಿದರು.
ಕೊನೆಯ ಓವರ್ ವೇಳೆ ತೆವಾಟಿಯಾ ಜೊತೆಗೆ ನಡೆದ ಸಂಭಾಷಣೆಯ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ರಶೀದ್, ಕೊನೆಯ ಓವರ್ನಲ್ಲಿ 22 ರನ್ಗಳು ಉಳಿದಿದ್ದವು. ನಾವು ಅಂತಿಮ ಓವರ್ನಲ್ಲಿ ನಮ್ಮ ಬೆಸ್ಟ್ ಬೌಲರ್ ಇದ್ದರೂ 25 ರನ್ ಬಿಟ್ಟುಕೊಟ್ಟಿದ್ದೇವೆ. ನಾವು ಇದೀಗ ಅದನ್ನು ಪಡೆಯಬೇಕು ಎಂದು ನಾನು ತೆವಾಟಿಯಾಗೆ ಹೇಳಿದೆ. ಒಂದು ವೇಳೆ ಒಂದು ಎಸೆತ ಮಿಸ್ ಆದರೂ ಆ ಬಗ್ಗೆ ಆಲೋಚಿಸಬಾರದು ಮತ್ತು ಭೀತಿಗೆ ಒಳಗಾಗಬಾರದು. ನಾವು ಪಂದ್ಯವನ್ನು ಯಶಸ್ವಿಯಾಗಿ ಮುಗಿಸುವ ಅಥವಾ ತುಂಬಾ ಹತ್ತಿರಕ್ಕೆ ತೆಗೆದುಕೊಂಡು ಹೋಗುವ ಅಗತ್ಯವಿದೆ. ಏಕೆಂದರೆ ಅದು ಮುಂದೆ ನಮಗೆ ರನ್ರೇಟ್ ವಿಷಯದಲ್ಲಿ ನೆರವಾಗಬಹುದು ಎಂದೆ. ಅದೃಷ್ಟವಶಾತ್ ನಾವು 4 ಸಿಕ್ಸರ್ ಪಡೆದುಕೊಂಡೆವು ಎಂದು ರಶೀದ್ ತಿಳಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್, ಅಭಿಷೇಕ್ ಶರ್ಮಾ ಮತ್ತು ಮಾರ್ಕ್ರಮ್ ಅವರ ಅರ್ಧಶತಕಗಳ ನೆರವಿನಿಂದ 195 ರನ್ಗಳಿಸಿತ್ತು. ಈ ಮೊತ್ತವನ್ನು ವೃದ್ಧಿಮಾನ್ ಸಹಾ(63) ಮತ್ತು ತೆವಾಟಿಯಾ ಹಾಗೂ ರಶೀದ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದ ಟೈಟನ್ಸ್ ಅಗ್ರಸ್ಥಾನಕ್ಕೇರಿತು.
ಇದನ್ನೂ ಓದಿ: ತೆವಾಟಿಯಾ-ರಾಶೀದ್ ಕೆಚ್ಚೆದೆಯ ಬ್ಯಾಟಿಂಗ್... ಹೈದರಾಬಾದ್ ವಿರುದ್ಧ ಗೆದ್ದ ಗುಜರಾತ್ ಟೈಟನ್ಸ್