ಅಹಮದಾಬಾದ್ (ಗುಜರಾತ್): ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 14ರಂದು ಗುಜರಾತ್ನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಉಭಯ ದೇಶಗಳ ಅಭಿಮಾನಿಗಳು ಮಾತ್ರವಲ್ಲದೇ ಇಡೀ ಕ್ರಿಕೆಟ್ ಜಗತ್ತು ಕಾತುರದಿಂದ ಕಾಯುತ್ತಿವೆ. ಈ ಪಂದ್ಯ ಅಹಮದಾಬಾದ್‌ನ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಕ್ಕೂ ಮುನ್ನ ಅಹಮದಾಬಾದ್‌ನ ವಿವಿಧ ಹೋಟೆಲ್‌ಗಳಲ್ಲಿನ ಕೊಠಡಿಗಳ ದರಗಳು ಭಾರಿ ಜಿಗಿತ ಕಂಡಿದೆ. ಕ್ರೀಡಾಂಗಣವು 1,32,000 ಸಾಮರ್ಥ್ಯದ ಆಸನಗಳನ್ನು ಹೊಂದಿದ್ದು, ಸಾಕಷ್ಟು ಪ್ರೇಕ್ಷಕರು ಸೇರುವ ನಿರೀಕ್ಷೆ ಇದೆ. ಇದರಿಂದಾಗಿ ಅನೇಕ ಹೋಟೆಲ್‌ಗಳು ಹಾಗೂ ಅತಿಥಿ ಗೃಹಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ. ಹೋಟೆಲ್ ರೂಮ್ಗಳ ದರ ಒಂದು ಹಂತದಲ್ಲಿ 50 ಸಾವಿರ ರೂ.ವರೆಗೂ ತಲುಪಿತ್ತು. ಸದ್ಯ ಈ ಬೆಲೆ 30 ಸಾವಿರ ರೂ.ಗೆ ಇಳಿದಿವೆ. ಆದರೆ, ಇನ್ನೂ ಕೆಲವು ಹೋಟೆಲ್‌ಗಳ ರೂಮ್ ಬಾಡಿಗೆಯು 1.5 ಲಕ್ಷ ರೂ.ವರೆಗೂ ಇದೆ.
ಈ ಕುರಿತು 'ಈಟಿವಿ ಭಾರತ್'ನೊಂದಿಗೆ ಅಹಮದಾಬಾದ್ ಹೋಟೆಲ್ ಅಸೋಸಿಯೇಶನ್‌ನ ಅಧ್ಯಕ್ಷ ನರೇಂದ್ರ ಸೋಮಾನಿ ಮಾತನಾಡಿ, ''ನಗರದ ಕೆಲವು ಪಂಚತಾರಾ ಹೋಟೆಲ್‌ಗಳು ಇನ್ನೂ 1.5 ಲಕ್ಷ ರೂಪಾಯಿ ಬಾಡಿಗೆಯನ್ನು ವಿಧಿಸುತ್ತಿವೆ. ಇವು ಕ್ರಿಕೆಟಿಗರು ಮತ್ತು ಬಿಸಿಸಿಐ ಅಧಿಕಾರಿಗಳು ಉಳಿದುಕೊಳ್ಳುವ ಹೋಟೆಲ್‌ಗಳಾಗಿವೆ. ಕೆಲವು ಕೊಠಡಿಗಳು ಖಾಲಿ ಇದ್ದಾಗಲೂ ವಿವಿಐಪಿ ಸದಸ್ಯರ ಭದ್ರತೆ ಪರಿಗಣಿಸಿ ದುಬಾರಿ ದರ ನಿಗದಿ ಮಾಡಲಾಗಿದೆ'' ಎಂದು ತಿಳಿಸಿದರು.
ಇಂಡೋ-ಪಾಕ್ ಪಂದ್ಯದ ಕಾರಣ ಹೋಟೆಲ್‌ಗಳು ಹಾಗೂ ಕೊಠಡಿಗಳಿಗೆ ಅಧಿಕ ಬೇಡಿಕೆ ಪರಿಗಣಿಸಿ ಆರಂಭದಲ್ಲಿ ದಿನಕ್ಕೆ 50,000 ರೂ.ವರೆಗೂ ದರ ನಿಗದಿ ಮಾಡಲಾಗಿತ್ತು. ಆದರೆ, ಪಂದ್ಯ ನಿಗದಿತ ದಿನ ಸಮೀಪಿಸುತ್ತಿದ್ದಂತೆ ದರಗಳು ಕುಸಿದಿವೆ. ಆದಾಗ್ಯೂ, ಹೋಟೆಲ್‌ಗಳು ಸಾಮಾನ್ಯ ದರಕ್ಕಿಂತ ದುಪ್ಪಟ್ಟು ದರವನ್ನು ಇನ್ನೂ ವಿಧಿಸುತ್ತಿವೆ. ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ವಿದೇಶಗಳಿಂದ ಬರುವ ಪ್ರೇಕ್ಷಕರು ಕೂಡ ಮುಂಚಿತವಾಗಿ ಹೋಟೆಲ್‌ಗಳನ್ನು ಕಾಯ್ದಿರಿಸಿದ್ದರು. ಆದರೆ, ಕೆಲವರಿಗೆ ವಿಮಾನ ಟಿಕೆಟ್ ಅಥವಾ ಪಂದ್ಯದ ಟಿಕೆಟ್ ಸಿಗದ ಕಾರಣ ರೂಮ್ಗಳ ಬುಕ್ಕಿಂಗ್ ರದ್ದುಗೊಳಿಸಿದ್ದಾರೆ.
ಸದ್ಯದ ಹೋಟೆಲ್‌ಗಳ ರೂಮ್ಗಳ ಬಾಡಿಗೆ ಮಾಹಿತಿ ನೀಡಿದ ನರೇಂದ್ರ ಸೋಮಾನಿ, ''ಅಕ್ಟೋಬರ್ 13ರಂದು ರೇಡಿಯನ್ಸ್ ಬ್ಲೂ ಹೋಟೆಲ್ನಲ್ಲಿ ರೂಮ್ ಬಾಡಿಗೆ 25,000 ರೂ. ಮತ್ತು ತಾಜ್ ಉಮ್ಮೆದ್ ಹೊಟೆಲ್ನಲ್ಲಿ 43,000 ರೂ. ಹಾಗೂ ಹೋಟೆಲ್ ಹಯಾತ್ ದಿನಕ್ಕೆ 35,000 ರೂಮ್ ಶುಲ್ಕ ವಿಧಿಸುತ್ತಿದೆ. ಆದರೆ, ಈ ದರಗಳು ಇನ್ನೂ ಕಡಿಮೆಯಾಗುವ ಸಾಧ್ಯತೆಯಿದೆ'' ಎಂದು ಹೇಳಿದರು.
ಇದನ್ನೂ ಓದಿ: ಶನಿವಾರ ಮೋದಿ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ.. ಇದುವರೆಗೂ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಗೆಲ್ಲದ ಪಾಕ್