ಜೈಪುರ್: ಆರಂಭದಲ್ಲಿ ತುಸು ಎಡವಿದರೂ ಚೇತರಿಸಿಕೊಂಡ ಇಂಡಿಯಾ ಕ್ಯಾಪಿಟಲ್ಸ್ ತಂಡ ಭಿಲ್ವಾರಾ ಕಿಂಗ್ಸ್ ವಿರುದ್ಧ 104 ರನ್‌ಗಳ ರೋಮಾಂಚಕ ಜಯ ದಾಖಲಿಸಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟ್ರೋಫಿ ಗೆದ್ದುಕೊಂಡಿದೆ.
ಬುಧವಾರ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ನ ಮಾಜಿ ನಾಯಕ ರಾಸ್ ಟೇಲರ್ 41 ಎಸೆತಗಳಲ್ಲಿ 82 ರನ್ ಗಳಿಸಿದರು. ಅವರು ಎಂಟು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಸಿಡಿಸಿದರು. ಆಸೀಸ್ ಅನುಭವಿ ಬ್ಯಾಟ್ಸಮನ್ ಮಿಚೆಲ್ ಜಾನ್ಸನ್ (35 ಎಸೆತಗಳಲ್ಲಿ 62) ಜೊತೆ ಸೇರಿ 211/7 ರ ಮೊತ್ತ ತಲುಪಿ ಕ್ಯಾಪಿಟಲ್ಸ್‌ನ ತಂಡದ ಅದ್ಭುತ ಪುನರುಜ್ಜೀವನಕ್ಕೆ ಕಾರಣರಾದರು.
ಗೌತಮ್ ಗಂಭೀರ್ ನೇತೃತ್ವದ ತಂಡವು ರಾಹುಲ್ ಶರ್ಮಾ (4/30) ಮತ್ತು ಮಾಂಟಿ ಪನೇಸರ್ (3-0-13-2) ರೂಪದಲ್ಲಿ ಆರಂಭಿಕ ಆಘಾತಗಳನ್ನು ಎದುರಿಸಿ, ಐದು ಓವರ್‌ಗಳಲ್ಲಿ 21/4ರ ಸ್ಕೋರ್ ಮಾಡಿತ್ತು. ಆದರೆ ಟೇಲರ್ ಕೇವಲ 60 ಎಸೆತಗಳಲ್ಲಿ 126 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಮುನ್ನಡೆ ತಂದರು. ನಂತರ ವಿಂಡೀಸ್ನ ಪವರ್‌ಹಿಟರ್ ಆಶ್ಲೇ ನರ್ಸ್ 19 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಆರು ಬೌಂಡರಿಗಳೊಂದಿಗೆ ಔಟಾಗದೇ 42 ರನ್ ಗಳಿಸಿ ಆಟ ಮುಗಿಸಿದರು.
ಇದಕ್ಕೆ ಉತ್ತರವಾಗಿ ಕ್ಯಾಪಿಟಲ್ ಕಿಂಗ್ಸ್‌ನ ಆರಂಭಿಕರಾದ ಮೊರ್ನೆ ವ್ಯಾನ್ ವೈಕ್ (5) ಮತ್ತು ವಿಲಿಯಂ ಪೋರ್ಟರ್‌ಫೀಲ್ಡ್ (12) ಮೊದಲ ನಾಲ್ಕು ಓವರ್‌ಗಳಲ್ಲಿ ಔಟಾದರು.
ಈ ಸಂದರ್ಭದಲ್ಲಿ ಯೂಸುಫ್ ಪಠಾಣ್ (6) ಮೇಲೆ ತಂಡ ಸಾಕಷ್ಟು ಅವಲಂಬಿತವಾಗಿತ್ತು. ಆದರೆ, ಅವರು ಹೆಚ್ಚು ಕಾಲ ಉಳಿಯಲಿಲ್ಲ. ಶೇನ್ ವ್ಯಾಟ್ಸನ್ (27) ರನೌಟ್ ಆದರು. ಜೆಸಾಲ್ ಕರಿಯಾ (22) ಒಂದಿಷ್ಟು ಭರವಸೆ ತೋರಿದರೂ ಹೆಚ್ಚು ಹೊತ್ತು ಮುಂದುವರಿಯಲು ಸಾಧ್ಯವಾಗಲಿಲ್ಲ. 12ನೇ ಓವರ್‌ನಲ್ಲಿ ಕಿಂಗ್ಸ್ ತಂಡದ ನಾಯಕ ಇರ್ಫಾನ್ ಪಠಾಣ್ (2) ಔಟಾದರು. ಕ್ಯಾಪಿಟಲ್ಸ್ ಪರ ಪವನ್ ಸುಯಲ್ (2/27), ಪಂಕಜ್ ಸಿಂಗ್ (2/14) ಮತ್ತು ಪ್ರವೀಣ್ ತಾಂಬೆ (2/19) ತಲಾ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಇಂಡಿಯಾ ಕ್ಯಾಪಿಟಲ್ಸ್ 211/7; 20 ಓವರ್‌ಗಳು (ರಾಸ್ ಟೇಲರ್ 82, ಮಿಚೆಲ್ ಜಾನ್ಸನ್ 62, ಆಶ್ಲೇ ನರ್ಸ್ ಔಟಾಗದೆ 42; ರಾಹುಲ್ ಶರ್ಮಾ 4/30, ಮಾಂಟಿ ಪನೇಸರ್ 2/13)
ಭಿಲ್ವಾರಾ ಕಿಂಗ್ಸ್ 107; 18.2 ಓವರ್ (ಶೇನ್ ವ್ಯಾಟ್ಸನ್ 27; ಪಂಕಜ್ ಸಿಂಗ್ 2/14, ಪ್ರವೀಣ್ ತಾಂಬೆ 2/19, ಪವನ್ ಸುಯಲ್ 2/27). ಇಂಡಿಯಾ ಕ್ಯಾಪಿಟಲ್ಸ್ 104 ರನ್‌ಗಳ ಜಯ ಸಾಧಿಸಿತು.
ಇದನ್ನು ಓದಿ:ಐಸಿಸಿ ಟಿ20 ವಿಶ್ವಕಪ್: 15 ನೇ ಆಟಗಾರನಿಲ್ಲದೇ ಆಸ್ಟ್ರೇಲಿಯಾಕ್ಕೆ ಹಾರಿದ ಟೀಂ ಇಂಡಿಯಾ