ನಾಗ್ಪುರ(ಮಹಾರಾಷ್ಟ್ರ): ಭಾರತೀಯ ವೇಗಿ ಉಮೇಶ್ ಯಾದವ್ ಅವರು ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಫ್ಲಾಟ್ ಖರೀದಿಸುವ ನೆಪದಲ್ಲಿ ಅವರ ಸ್ನೇಹಿತ ಮತ್ತು ಮ್ಯಾನೇಜರ್ 44 ಲಕ್ಷ ರೂಪಾಯಿ ವಂಚಿಸಿದ್ದಾರೆ. ನಾಗಪುರದ ನಿವಾಸಿ ಯಾದವ್ ನೀಡಿದ ದೂರಿನ ಮೇರೆಗೆ ಶೈಲೇಶ್ ಠಾಕ್ರೆ ವಿರುದ್ಧ ವಂಚನೆಗಾಗಿ ಪ್ರಕರಣ ದಾಖಲಿಸಲಾಗಿದೆ. ಠಾಕ್ರೆ (37) ಕೊರಾಡಿ ನಿವಾಸಿಯಾಗಿದ್ದು, ಯಾದವ್ ಅವರ ಸ್ನೇಹಿತರೂ ಆಗಿದ್ದಾರೆ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.
ಈ ಪ್ರಕರಣ ಸಂಬಂಧ ಯಾರನ್ನೂ ಬಂಧಿಸಿಲ್ಲ. ಯಾದವ್ ಅವರು ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿ ಆಯ್ಕೆಯಾದ ನಂತರ, ಅವರು ಜುಲೈ 15, 2014 ರಂದು ತಮ್ಮ ಸ್ನೇಹಿತ ಠಾಕ್ರೆ ಅವರನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು. ಅವರು ನಿರುದ್ಯೋಗಿಯಾಗಿದ್ದರು. ಹೀಗಾಗಿ ಉಮೇಶ್ ಅವರು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.
ಠಾಕ್ರೆ ಕಾಲಕ್ರಮೇಣ ಯಾದವ್‌ನ ವಿಶ್ವಾಸ ಗಳಿಸಿದರು. ಉಮೇಶ್ ಯಾದವ್ ಅವರ ಎಲ್ಲಾ ಹಣಕಾಸು ವ್ಯವಹಾರಗಳನ್ನು ಅವರು ನಿಭಾಯಿಸಲು ಪ್ರಾರಂಭಿಸಿದರು. ಅವರು ಯಾದವ್ ಅವರ ಬ್ಯಾಂಕ್ ಖಾತೆ, ಆದಾಯ ತೆರಿಗೆ ಮತ್ತು ಇತರ ಹಣಕಾಸು ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಯಾದವ್ ನಾಗ್ಪುರದಲ್ಲಿ ಭೂಮಿಯನ್ನು ಖರೀದಿಸಲು ಹುಡುಕುತ್ತಿದ್ದಾಗ ಠಾಕ್ರೆ ಅವರು ಫ್ಲಾಟ್ ನೋಡುವುದಾಗಿ ಯಾದವ್ಗೆ ತಿಳಿಸಿದ್ದರಂತೆ.
ಠಾಕ್ರೆ ಬಂಜರು ಪ್ರದೇಶದಲ್ಲಿ ಪ್ಲಾಟ್ ನೋಡಿ ಉಮೇಶ್ ಯಾದವ್ಗೆ ತಿಳಿಸಿದ್ದಾರೆ. ಅದರ ಖರೀದಿಗೆ ಯಾದವ್ ಅವರ ಬಳಿ 44 ಲಕ್ಷ ರೂ ಪಡೆದುಕೊಂಡಿದ್ದಾರೆ. ಉಮೇಶ್ ಯಾದವ್ ಠಾಕ್ರೆ ಅವರ ಬ್ಯಾಂಕ್ ಖಾತೆಗೆ 44 ಲಕ್ಷ ರೂ. ಠೇವಣಿ ಮಾಡಿದ್ದರು. ಆದರೆ, ಠಾಕ್ರೆ ಅವರು ಆ ಫ್ಲಾಟನ್ನು ತಮ್ಮ ಹೆಸರಿನಲ್ಲಿಯೇ ಖರೀದಿ ಮಾಡಿದ್ದಾರೆ. ಯಾದವ್ ವಂಚನೆಯ ಬಗ್ಗೆ ತಿಳಿದಾಗ, ಅವರು ಠಾಕ್ರೆ ಅವರನ್ನು ತಮ್ಮ ಹೆಸರಿಗೆ ಭೂಮಿಯ ಮಾಲೀಕತ್ವವನ್ನು ವರ್ಗಾಯಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಠಾಕ್ರೆ ಇದಕ್ಕೆ ಒಪ್ಪದೇ ನಿರಾಕರಿಸಿದ್ದಾರೆ. ಹಣವನ್ನಾದರೂ ಕೊಡುವಂತೆ ಯಾದವ್ ಬೇಡಿಕೆ ಇಟ್ಟಿದ್ದರಂತೆ. ಅದಕ್ಕೂ ಠಾಕ್ರೆ ಒಪ್ಪಿಲ್ಲದ ಕಾರಣ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾದವ್ ಅವರು ಕೊರಾಡಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಗಾಗಿ ಶಿಕ್ಷೆ) ಮತ್ತು 420 (ವಂಚನೆ ಮತ್ತು ಆ ಮೂಲಕ ಆಸ್ತಿಯನ್ನು ಅಪ್ರಾಮಾಣಿಕವಾಗಿ ವಿತರಿಸಲು ಪ್ರೇರೇಪಿಸುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೋಲ್ಟ್ಗೆ 100 ಕೋಟಿ ವಂಚನೆ: ಇತ್ತೀಚೆಗೆ ಜಮೈಕಾದ ವೇಗದ ದೊರೆ ಉಸೇನ್ ಬೋಲ್ಟ್ ಅವರ ಖಾತೆಗೆ ಕನ್ನ ಹಾಕಲಾಗಿತ್ತು. ಈ ಬಗ್ಗೆ ಎಸ್ಎಸ್ಎಲ್ ವಿರುದ್ಧ ಬೋಲ್ಟ್ ನ್ಯಾಯಾಂಗ ಹೋರಾಟಕ್ಕೆ ಮುಂದಾಗಿದ್ದಾರೆ. ಜಮೈಕಾದ ಹಣಕಾಸು ತನಿಖಾ ಇಲಾಖೆ ಮತ್ತು ಹಣಕಾಸು ಸೇವಾ ಆಯೋಗವು ಜಂಟಿಯಾಗಿ ಈ ಬಗ್ಗೆ ತನಿಖೆ ನಡೆಸುತ್ತಿವೆ. ಉಸೇನ್ ಬೋಲ್ಟ್ ಅವರಿಂದ ಹಣ ನಾಪತ್ತೆಯಾಗಿರುವ ಖಾತೆಯು ಸ್ಟಾಕ್ಸ್ ಅಂಡ್ ಸೆಕ್ಯುರಿಟೀಸ್ ಲಿಮಿಟೆಡ್ (SSL) ನಲ್ಲಿದೆ. ಈ ಸಂಬಂಧ SSL ಪೊಲೀಸರನ್ನೂ ಸಂಪರ್ಕಿಸಿದೆ. ಬೋಲ್ಟ್ 2012ರಲ್ಲಿ ಜಮೈಕಾದ ಬ್ರೋಕರೇಜ್ ಸಂಸ್ಥೆ ಸ್ಟಾಕ್ಸ್ ಮತ್ತು ಸೆಕ್ಯುರಿಟೀಸ್ ಲಿಮಿಟೆಡ್‌ನಲ್ಲಿ ಖಾತೆಯನ್ನು ತೆರೆದಿದ್ದರು.
ಉಸೇನ್ ಬೋಲ್ಟ್ ಅವರ ಖಾತೆಯಲ್ಲಿದ್ದ $ 12.7 ಮಿಲಿಯನ್ (ಸುಮಾರು 98 ಕೋಟಿ ರೂ.) ವಂಚನೆ ನಡೆದಿದೆ. ಇದು ಅವರ ಇದುವರೆಗಿನ ಗಳಿಕೆಯ ಹಣ ಮತ್ತು ಅವರ ಸಂಪೂರ್ಣ ಜೀವನ ಉಳಿತಾಯ ಹಾಗೂ ಪಿಂಚಣಿ ಹಣವಿತ್ತು. ಜನವರಿ 11 ರಂದು ಉಸೇನ್ ಬೋಲ್ಟ್ ಅವರಿಗೆ ವಂಚನೆಯ ಬಗ್ಗೆ ತಿಳಿದಿದೆ. ವಂಚನೆ ನಂತರ ಅವರ ಖಾತೆಯಲ್ಲಿ ಕೇವಲ 12 ಸಾವಿರ ಡಾಲರ್ (ಸುಮಾರು 10 ಲಕ್ಷ) ಬಾಕಿ ಇದೆಯಂತೆ. ಸ್ಟಾಕ್ಸ್ ಅಂಡ್ ಸೆಕ್ಯುರಿಟೀಸ್ ಲಿಮಿಟೆಡ್‌ನಲ್ಲಿ ಬೋಲ್ಟ್ ಅವರ ರೀತಿಯಲ್ಲಿ ಹಲವಾರು ಜನರಿಗೆ ವಂಚನೆ ಆಗಿದ್ದು, ಅದಕ್ಕೆ ಅಲ್ಲಿನ ಅಧಿಕಾರಿ ಕಾರಣ ಎಂದು ತಿಳಿದು ಬಂದಿದ್ದು, ಸರ್ಕಾರ ಸಂಪೂರ್ಣ ತನಿಖೆಗೆ ಮುಂದಾಗಿದೆ.
ಇದನ್ನೂ ಓದಿ: ಉಸೇನ್ ಬೋಲ್ಟ್ ಖಾತೆಗೆ ಕನ್ನ: 100 ಕೋಟಿ ಕಳೆದುಕೊಂಡ ಜಮೈಕಾದ ಒಲಿಂಪಿಕ್ ದಂತಕಥೆ