ಲಂಡನ್: ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ತಮ್ಮ ಬೆರಳಿಗೆ ಗಾಯವಾದ ಕಾರಣ ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಈಗ ಸದ್ಯ ಆರ್ಚರ್ ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿರ್ದೇಶಕ ಆಶ್ಲೇ ಗೈಲ್ಸ್ "ಆರ್ಚರ್ ಫಿಶ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿದ್ದು, ತನ್ನ ಬಲಗೈ ಬೆರಳಿನ ಸ್ನಾಯುವಿಗೆ ಚುಚ್ಚಿಕೊಂಡಿದ್ದ ಗಾಜಿನ ತುಂಡನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ" ಎಂದು ಹೇಳಿದ್ದಾರೆ.
ಆರ್ಚರ್ ಅವರಿಗೆ ಜನವರಿಯಲ್ಲೇ ಗಾಯವಾಗಿದ್ದರೂ ಭಾರತ ವಿರುದ್ಧದ ಟೆಸ್ಟ್ ಮತ್ತು ಟಿ-20 ಸರಣಿಯಲ್ಲಿ ಆಡಿದ್ದರು. ‘ಕೈಯಲ್ಲಿ ಹಿಡಿದಿದ್ದ ಫಿಶ್ ಟ್ಯಾಂಕ್ ಅಚಾನಕ್ ಆಗಿ ಕೆಳಗೆ ಬಿದ್ದಿದೆ. ಫಿಶ್ ಟ್ಯಾಂಕಿನ ಗಾಜಿನಿಂದ ಅವರ ಕೈಗೆ ಗಾಯವಾಗಿದೆ’ ಎಂದು ಗೈಲ್ಸ್ ತಿಳಿಸಿದ್ದಾರೆ.
‘ಟ್ವಿಟರ್‌ನಲ್ಲಿ ಈ ಕುರಿತು ಯಾವ ಅಭಿಪ್ರಾಯ ಬರಲಿದೆ ಎಂದು ನನಗೆ ತಿಳಿದಿದೆ. ಇದು ಪಿತೂರಿಯಂತೆ ಭಾಸವಾಗುತ್ತಿದೆ. ಆದರೆ, ಇದು ನಿಜ ಪಿತೂರಿ ಅಲ್ಲ, ಅವರು ಮನೆಯಲ್ಲಿ ಫಿಶ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಈ ಅವಘಡ ಸಂಭವಿಸಿದೆ’ ಎಂದು ಹೇಳಿದ್ದಾರೆ.
ಓದಿ : ಭಾರತದ ಮಹಿಳಾ ಟಿ -20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ಗೆ ಕೊರೊನಾ
‘ಆರ್ಚರ್ ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅಪಾಯದಿಂದ ಹೊರ ಬಂದಿದ್ದಾರೆ. ಬೆರಳಿನ ಸ್ನಾಯುವಿನಲ್ಲಿ ಸೇರಿಕೊಂಡಿದ್ದ ಸಣ್ಣ ಗಾಜಿನ ತುಂಡನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆದಿದ್ದಾರೆ’ ಎಂದಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಬೇಕಿದ್ದ ಆರ್ಚರ್, ಈ ಗಾಯದಿಂದಾಗಿ ಸರಣಿಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.