ಮುಂಬೈ: ಭಾನುವಾರ ತಮ್ಮ ಇಹಲೋಕ ತ್ಯಜಿಸಿರುವ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು 1983ರ ವಿಶ್ವಕಪ್ ಗೆದ್ದ ಕಪಿಲ್ ದೇವ್ ನೇತೃತ್ವದ ಭಾರತ ತಂಡವನ್ನು ಗೌರವಿಸುವುದಕ್ಕಾಗಿ ಆ ಕಾಲದಲ್ಲೇ ಸಂಗೀತ ಕಾರ್ಯಕ್ರಮದ ಮೂಲಕ ಬರೋಬ್ಬರಿ 20 ಲಕ್ಷರೂ ದೇಣಿಗೆ ಸಂಗ್ರಹಿಸಿ ಆಟಗಾರರಿಗೆ ನೀಡಿದ್ದರೆಂದು ಎಂದು ಭಾರತದ ಮಾಜಿ ನಾಯಕ ಮನ್ಸೂರ್ಲ್ ಅಲಿ ಖಾನ್ ಪಟೌಡಿ ಪತ್ನಿ ಹಾಗೂ ಬಾಲಿವುಡ್ ಹಿರಿಯ ನಟಿ ಶರ್ಮಿಳಾ ಠಾಗೂರ್ ಬಹಿರಂಗ ಪಡಿಸಿದ್ದಾರೆ.
ಗಾಯನದ ಮೂಲಕ ಭಾರತದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಲತಾ ಅವರು ಕ್ರಿಕೆಟ್ನ ಕಟ್ಟಾ ಅಭಿಮಾನಿಯಾಗಿದ್ದರು. ಪ್ರಸ್ತುತ ಬಿಸಿಸಿಐ ವಿಶ್ವ ಕ್ರಿಕೆಟ್ನ ಅನಭಿಶಕ್ತ ದೊರೆಯಾಗಿ ಮೆರೆಯುತ್ತಿದೆ. ಆದರೆ 70-80ರ ದಶಕದಲ್ಲಿ ವಿದೇಶ ಪ್ರಯಾಣಕ್ಕೆ ಹಣ ಹೊಂದಿಸಲು ಬೋರ್ಡ್ನಿಂದ ಸಾಧ್ಯವಾಗಿರಲಿಲ್ಲ.
1983ರ ವಿಶ್ವಕಪ್ ಅಚ್ಚರಿಯ ಪ್ರದರ್ಶನ ನೀಡಿದ್ದ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಮಣಿಸಿ ಚಾಂಪಿಯನ್ ಆಗಿತ್ತು. ಆದರೆ ಈ ಅದ್ಭುತ ಸಾಧನೆ ಮಾಡಿದ ತಂಡವನ್ನು ಸನ್ಮಾನಿಸಲು ಕೂಡ ಬಿಸಿಸಿಐ ಹಣವಿಲ್ಲದೇ ಪರದಾಟ ನಡೆಸಿದ್ದ ಸಂದರ್ಭದಲ್ಲಿ ಲತಾ ಮಂಗೇಶ್ಕರ್ ಬಿಸಿಸಿಐ ಬೆಂಬಲಕ್ಕೆ ನಿಂತಿದ್ದರು.
"ಅವರು (ಲತಾ ಮಂಗೇಶ್ಕರ್) ಕ್ರಿಕೆಟ್ ಅನ್ನು ತುಂಬಾ ಇಷ್ಟಪಡುತ್ತಿದ್ದರು. 1983 ರಲ್ಲಿ, ನಾವು (ಭಾರತ) ವಿಶ್ವಕಪ್ ಗೆದ್ದಾಗ ಆಟಗಾರರನ್ನು ಗೌರವಿಸುವುದಕ್ಕೆ ಹಣವಿರಲಿಲ್ಲ. ಆ ಸಂದರ್ಭದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಕ್ರಿಕೆಟ್ ಕಲಿಗಳನ್ನು ಗೌರವಿಸಲು ಲತಾ ಮಂಗೇಶ್ಕರ್ ತಮ್ಮ ಸಹೋದರ ಹೃದಯನಾಥ್ ಮಂಗೇಶ್ಕರ್ ಜೊತೆಗೆ ನಿಧಿ ಸಂಗ್ರಹಕ್ಕೆ ಮುಂದಾದರು. ಭಾರತೀಯ ಕ್ರಿಕೆಟ್ ತಂಡಕ್ಕೆ 20 ಲಕ್ಷ ರೂ ಸಂಗ್ರಹಿಸಿದರು ಮತ್ತು ಎಲ್ಲ ಆಟಗಾರರಿಗೆ ತಲಾ ಒಂದು ಲಕ್ಷ ರೂ ಹಂಚಿದ್ದರು "ಎಂದು ಠಾಗೋರ್ ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಅದ್ವಿತೀಯ ಪ್ರದರ್ಶನ ತೋರಿದ ಭಾರತ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಬಿಸಿಸಿಐ ಬಳಿ ಹಣವಿಲ್ಲದ ಕಾರಣ ತಂಡದ ಮ್ಯಾನೇಜರ್ ರಾಜ್ ಸಿಂಗ್ ಡುಂಗರ್ಪುರ್ ಟೀಮ್ ಇಂಡಿಯಾ ಆಟಗಾರರಿಗೆ ಗೌರವ ಧನ ನೀಡಲು ಮತ್ತು ಅಭಿನಂದನಾ ಕಾರ್ಯಕ್ರಮ ನಡೆಸಲು ನಿಧಿ ಸಂಗ್ರಹಿಸಲು ಯೋಜನೆ ರೂಪಿಸಿದ್ದರು.
ಇದಕ್ಕಾಗಿ ಸಾಕಷ್ಟು ಜನರ ಬಳಿ ಸಹಾಯ ಸಹಾಯ ಹಸ್ತ ಚಾಚಿದ್ದರು. ಆದರೆ, ಇದರಿಂದ ಅಗತ್ಯತೆಗೆ ತಕ್ಕ ಹಣ ಮತ್ತು ನೆರವು ಸಿಗದಿದ್ದಾಗ ಡುಂಗರ್ಪುರ್ ಅವರು ದೆಹಲಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲು ಯೋಜನೆ ರೂಪಿಸಿದರು. ಇದಕ್ಕೆ ಲತಾ ಮಂಗೇಶ್ಕರ್ ಅವರ ಸಹಾಯ ಕೋರಿದಾಗ ಅವರು ಸಂತೋಷದಿಂದ ಆಗಮಿಸಿ, ಈ ಮಹತ್ವದ ಕಾರ್ಯದಲ್ಲಿ ಯಾವುದೇ ಪ್ರತಿಫಲಪೇಕ್ಷೆಯಿಲ್ಲದೆ ನೆರವಾಗಿದ್ದರು.
ಇದನ್ನೂ ಓದಿ:ಲತಾ ಮಂಗೇಶ್ಕರ್ ಅಪ್ರತಿಮ ಕ್ರಿಕೆಟ್ ಪ್ರೇಮಿ, 2011ರ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಗೆಲುವಿಗಾಗಿ ಉಪವಾಸ ಮಾಡಿದ್ರು