ದುಬೈ: ದಾಸುನ್ ಶನಕ ಅವರ ನಾಯಕತ್ವದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು 6ನೇ ಬಾರಿಗೆ ಏಷ್ಯಾ ಕಪ್ 2022 ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಟೂರ್ನಿಯುದ್ದಕ್ಕೂ ತಂಡ ಅದ್ಭುತ ಪ್ರದರ್ಶನ ತೋರಿದೆ. ತಂಡವು ಈ ಸೀಸನ್ನಲ್ಲಿ 6 ಪಂದ್ಯಗಳನ್ನು ಆಡಿದ್ದು ಈ ಪೈಕಿ ಐದರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಅಂತಿಮ ಪಂದ್ಯದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು ಕ್ರಿಕೆಟ್ ಲೋಕವನ್ನು ಹುಬ್ಬೇರಿಸಿತು.
ಪಂದ್ಯದ ಬಳಿಕ ಮಾತನಾಡಿದ ನಾಯಕ ಶನಕ, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆದ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಪಂದ್ಯಾರಂಭದಿಂದಲೂ ನಮ್ಮ ಟೀಂ ಅದ್ಭುತ ಪ್ರದರ್ಶನ ನೀಡಿದೆ. ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮೂರರಲ್ಲೂ ಆಟಗಾರರು ಸಂಪೂರ್ಣ ಬೆಂಬಲ ನೀಡಿದರು ಎಂದರು.
ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಅವರು ಐಪಿಎಲ್ ವಿಚಾರ ಪ್ರಸ್ತಾಪಿಸಿದರು. 2021 ರಲ್ಲಿ ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ನೇತೃತ್ವದ ಸಿಎಸ್‌ಕೆ ತಂಡ ದುಬೈನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಗೆದ್ದಿತ್ತು. ಅದು ನನ್ನ ಮನಸ್ಸಿನಲ್ಲಿ ಉಳಿದಿದೆ. ನಾವು ಕೂಡಾ ಅದರ ಬಗ್ಗೆ ಮಾತನಾಡಿದ್ದೇವೆ. ಅದೇ ರೀತಿ ರಣತಂತ್ರ ರೂಪಿಸಿದ್ದೆವು ಎಂದರು.
ಶನಕ ಹೇಳಿದ 2021 ಐಪಿಎಲ್ ಪಂದ್ಯವಿದು..: ಕೊರೊನಾ ಕಾರಣಕ್ಕೆ ಐಪಿಎಲ್ 2021 ಕ್ರಿಕೆಟ್ ಪಂದ್ಯಾವಳಿಯನ್ನು ಯುಎಇಯಲ್ಲಿ ನಡೆಸಲಾಗಿತ್ತು. ಟೂರ್ನಮೆಂಟ್‌ನ ಆ ಆವೃತ್ತಿಯಲ್ಲಿಯೂ ಎರಡನೇ ಬ್ಯಾಟಿಂಗ್ ಮಾಡಿದ ತಂಡಗಳು ಹೆಚ್ಚು ಗೆದ್ದಿದ್ದವು. ಆದರೆ ಸಿಎಸ್‌ಕೆ ಮೊದಲು ಬ್ಯಾಟಿಂಗ್ ಮಾಡಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿತ್ತು.
ಇದನ್ನೂ ಓದಿ: ಶ್ರೀಲಂಕಾ-ಪಾಕ್ ಪಂದ್ಯ ನೋಡಲು ಭಾರತದ ಜರ್ಸಿ ಧರಿಸಿದವರಿಗೆ ನೋ ಎಂಟ್ರಿ!