ಲಂಡನ್: ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆಗಳನ್ನ ನಿರ್ಮಾಣ ಮಾಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆ ಮೇಲೆ ಐವರು ಆಟಗಾರರ ಕಣ್ಣು ಬಿದ್ದಿದೆ.
ಈಗಾಗಲೆ 2019ರ ವಿಶ್ವಕಪ್ ಟೂರ್ನಿಯಲ್ಲಿ ಹಲವು ನೂತನ ದಾಖಲೆಗಳು ನಿರ್ಮಾಣವಾಗಿದ್ದು, ಕೆಲ ದಿಗ್ಗಜರ ದಾಖಲೆಳು ಬ್ರೇಕ್ ಆಗಿವೆ. ಇದೀಗ 2003ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ನಿರ್ಮಾಣ ಮಾಡಿದ್ದ ದಾಖಲೆ ಮೇಲೆ ಐವರು ಆಟಗಾರರ ಕಣ್ಣು ಬಿದ್ದಿದೆ.
2003ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ 673 ರನ್ ಗಳಿಸಿದ್ದರು. ವಿಶ್ವಕಪ್ ಕ್ರಿಕೆಟ್ ಟೂರ್ನಿಯೊಂದರಲ್ಲೇ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಸಚಿನ್ ಹೆಸರಿನಲ್ಲಿದೆ. ಪ್ರಸಕ್ತ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಐವರು ಆಟಗಾರರು ಈ ದಾಖಲೆಯನ್ನ ಬ್ರೇಕ್ ಮಾಡುವ ಸೂಚನೆ ನೀಡಿದ್ದಾರೆ.
ಆಸ್ಟ್ರೇಲಿಯಾ ತಂಡದ ಸ್ಫೋಟಕ ಆಟಗಾರ ಡೆವಿಡ್ ವಾರ್ನರ್ ಈವರೆಗೆ 447ರನ್ ಗಳಿಸಿದ್ದು, ಸಚಿನ್ ದಾಖಲೆ ಬ್ರೇಕ್ ಮಾಡಲು 227ರನ್ಗಳ ಅವಶ್ಯಕತೆ ಇದೆ. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾಗೆ ಇನ್ನೂ 3 ಪಂದ್ಯಗಳು ಬಾಕಿ ಇದ್ದು ಒಂದು ವೇಳೆ ವಾರ್ನರ್ 226ರನ್ ಗಳಿಸಿದ್ರೆ ಸಚಿನ್ ದಾಖಲೆ ಬ್ರೇಕ್ ಮಾಡೊದು ಖಚಿತ.
ಇನ್ನುಳಿದಂತೆ ಬಾಂಗ್ಲಾ ತಂಡದ ಆಟಗಾರ ಶಕಿಬ್ ಅಲ್ ಹಸನ್ 425, ಜೋ ರೂಟ್ 424, ಆ್ಯರೋನ್ ಫಿಂಚ್ 396 ಮತ್ತು ಹಿಟ್ ಮ್ಯಾನ್ ರೋಹಿತ್ ಶರ್ಮಾ 319 ರನ್ಗಳಿಸಿದ್ದು, ಸಚಿನ್ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.
ಭಾರತ ತಂಡ ಲೀಗ್ ಹಂತದಲ್ಲಿ ಇನ್ನೂ 6 ಪಂದ್ಯಗಳನ್ನ ಆಡಬೇಕಿದೆ. 3 ಪಂದ್ಯದಿಂದ 319 ರನ್ ಗಳಿಸಿರುವ ರೋಹಿತ್ ಇನ್ನುಳಿದ 5 ಪಂದ್ಯಗಳಿಂದ 354 ರನ್ ಗಳಿಸಿದ್ರೆ ಸಚಿನ್ ದಾಖಲೆಯನ್ನ ಬ್ರೇಕ್ ಮಾಡೋದು ಪಕ್ಕಾ.