ಹೈದರಾಬಾದ್: ಭಾರತ ಕ್ರಿಕೆಟ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಭಾರತದ ಪ್ರಸಿದ್ಧ ಜೋಡಿಗಳಲ್ಲಿ ಒಂದು. ಇಂದು ಈ ಜೋಡಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ.
ಧೋನಿ ಅಥವಾ ಸಾಕ್ಷಿ ಹೆಚ್ಚಾಗಿ ತಮ್ಮ ವೈಯಕ್ತಿಕ ಬದುಕಿನ ಕುರಿತು ಮಾಧ್ಯಮಗಳಲ್ಲಿ ಮಾತನಾಡಲು ಇಷ್ಟಪಡುವುದಿಲ್ಲ. ಇಂದು ಇವರಿಬ್ಬರ ವಿವಾಹಕ್ಕೆ 10 ವರ್ಷ ತುಂಬಿದೆ.
ಅನೇಕ ಬಾಲಿವುಡ್ ತಾರೆಯರೊಂದಿಗೆ ಎಂ ಎಸ್ ಧೋನಿ ಹೆಸರು ಕೇಳಿಬರುತ್ತಿತ್ತು. ಆದರೆ, 2010ರ ಜುಲೈ 4ರಂದು ಸಾಕ್ಷಿಯನ್ನು ವರಿಸುವ ಮೂಲಕ ಧೋನಿ ಎಲ್ಲ ವದಂತಿಗಳಿಗೆ ತೆರೆ ಎಳೆದರು.
ವರದಿಗಳ ಪ್ರಕಾರ, ಧೋನಿ ಶಾಲೆಯಲ್ಲಿ ಸಾಕ್ಷಿಯ ಸೀನಿಯರ್ ಆಗಿದ್ದರು. ಇಬ್ಬರ ತಂದೆಯಂದಿರು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಸಾಕ್ಷಿಯ ತಂದೆಯ ಕೆಲಸದ ಕಾರಣದಿಂದಾಗಿ ಇಬ್ಬರೂ ಬೇರ್ಪಟ್ಟಿದ್ದರು.
ಎಂ.ಎಸ್.ಧೋನಿ ಮತ್ತು ಸಾಕ್ಷಿ 2007ರಲ್ಲಿ ಕೋಲ್ಕತ್ತಾದಲ್ಲಿ ಮತ್ತೊಮ್ಮೆ ಪರಸ್ಪರ ಭೇಟಿಯಾದರು. ಧೋನಿ ಹಾಗೂ ಭಾರತ ಕ್ರಿಕೆಟ್ ತಂಡದ ಇತರ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಸಾಕ್ಷಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದರು.
ಹೋಟೆಲ್ ಮ್ಯಾನೇಜರ್ ಬಳಿ ಧೋನಿ ಸಾಕ್ಷಿಯ ಮೊಬೈಲ್ ನಂಬರ್ ಕೂಡಾ ಕೇಳಿದ್ದರು ಎಂದು ಹೇಳಲಾಗುತ್ತಿದೆ. ಧೋನಿ ಮತ್ತು ಸಾಕ್ಷಿ 2008ರಲ್ಲಿ ಡೇಟಿಂಗ್ ಪ್ರಾರಂಭಿಸಿ, 2010ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.