ಮುಂಬೈ: ಟೀಂ ಇಂಡಿಯಾದಲ್ಲಿ ನಮ್ಮ ಆಯ್ಕೆ ಏನಿದ್ದರೂ ರಿಷಭ್ ಪಂತ್ ಮಾತ್ರ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಕಡ್ಡಿ ಮುರಿದಂತೆ ಹೇಳಿದ್ದಾರೆ.
ಬಾಂಗ್ಲಾದೇಶದ ವಿರುದ್ಧದ ಟಿ-20 ಮತ್ತು ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಟಿ-20 ಸರಣಿಯಿಂದ ಮಹೇಂದ್ರ ಸಿಂಗ್ ಧೋನಿ ಅವರನ್ನ ಕೈ ಬಿಡಲಾಗಿದೆ. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್, ನಮ್ಮ ಆಯ್ಕೆ ಏನಿದ್ದರೂ ರಿಷಭ್ ಪಂತ್ ಮಾತ್ರ ಎಂದಿದ್ದಾರೆ.
ವಿಶ್ವಕಪ್ ಟೂರ್ನಿ ನಂತರ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ತೀರ್ಮಾನ ನೀಡಿದ್ದೆವು. ಹೀಗಾಗಿ ಪಂತ್ಗೆ ಅವಕಾಶ ನೀಡಲಾಗಿದೆ. ಪಂತ್ ಉತ್ತಮ ಪ್ರದರ್ಶನ ನೀಡದಿರಬಹುದು ಆದ್ರೆ, ಒಬ್ಬರಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ಅವನು ಉತ್ತಮ ಆಟಗಾರ ಆಗುತ್ತಾನೆ ಆದ್ದರಿಂದ ರಿಷಭ್ ಪಂತ್ಗೆ ಅವಕಾಶ ನೀಡಲಾಗುತ್ತಿದೆ.
ಬಾಂಗ್ಲಾ ವಿರುದ್ಧದ ಸರಣಿಗೆ ಸಂಜು ಸ್ಯಾಮ್ಸನ್ಗೂ ಅವಕಾಶ ನೀಡಲಾಗಿದೆ. ನಿಮಗೆ ನಮ್ಮ ಯೋಜನೆ ಏನೆಂಬುದು ಅರ್ಥವಾಗಿದೆ ಎಂದುಕೊಳ್ಳುತ್ತೇನೆ ಎಂದಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಧೋನಿ ಆಯ್ಕೆ ಸಾಧ್ಯವಿಲ್ಲ ಎಂದು ಪ್ರಸಾದ್ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.