ಮುಂಬೈ: ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ವಾಸೀಂ ಜಾಫರ್ ಎಲ್ಲಾ ಮಾದರಿ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬುದು ನನ್ನ ತಂದೆ ಕಂಡಿದ್ದ ಕನಸಾಗಿತ್ತು. ಈ ಕನಸು ನನಸು ಮಾಡಿರುವ ಖುಷಿ ನನಗಿದೆ ಎಂದಿದ್ದಾರೆ.
42 ವರ್ಷದ ವಾಸೀಂ ಜಾಫರ್, ಟೀಂ ಇಂಡಿಯಾ ಪರ 31 ಟೆಸ್ಟ್ ಪಂದ್ಯಗಳನ್ನಾಡಿದ್ದು ಈ ಮೂಲಕ 1,944 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 5 ಶತಕ ಹಾಗೂ 11 ಅರ್ಧಶತಕ ಸೇರಿದೆ. ವೆಸ್ಟ್ ಇಂಡೀಸ್ ವಿರುದ್ಧ ಸಿಡಿಸಿರುವ 212 ರನ್ ಇವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. 2006ರಲ್ಲಿ ಭಾರತ ಪರ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದ ಈ ಆಟಗಾರ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಿದ್ದರು.
ರಣಜಿ ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಿಸಿರುವ ಜಾಫರ್, 1996 ರಿಂದ 2020ರವರೆಗೆ 150ಕ್ಕೂ ಹೆಚ್ಚು ರಣಜಿ ಪಂದ್ಯಗಳನ್ನಾಡಿದ್ದಾರೆ. ಈ ಪಂದ್ಯಗಳಲ್ಲಿ 12 ಸಾವಿರ ರನ್ ಸಾಧನೆ ಮಾಡಿದ್ದಾರೆ. ರಣಜಿ ಕ್ರಿಕೆಟ್ನಲ್ಲಿ ಇಷ್ಟೊಂದು ರನ್ ಮಾಡಿರುವ ಮೊದಲ ಆಟಗಾರ ಎಂಬ ದಾಖಲೆಯೂ ಇವರ ಹೆಸರಲ್ಲಿದೆ.
ರಣಜಿಯಲ್ಲಿ ವಿದರ್ಭ ಹಾಗೂ ಮುಂಬೈ ತಂಡಗಳನ್ನು ಪ್ರತಿನಿಧಿಸಿದ್ದು ಟೀಂ ಇಂಡಿಯಾ ಪರ ಎರಡು ಏಕದಿನ ಪಂದ್ಯಗಳಲ್ಲೂ ಇವರು ಕಾಣಿಸಿಕೊಂಡಿದ್ದರು. 260 ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ವಾಸೀಂ ಜಾಫರ್ ಬರೋಬ್ಬರಿ 19,410 ರನ್ಗಳಿಕೆ ಮಾಡಿದ್ದು, ಇದರಲ್ಲಿ 57 ಶತಕ ಹಾಗೂ 91 ಅರ್ಧಶತಕ ಸೇರಿದೆ. 314 ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.