ಮುಂಬೈ: ಬಿಸಿಸಿಐ ಸಂವಿಧಾನದ ಪ್ರಕಾರ ಗಂಗೂಲಿ ಅಧಿಕಾರಾವಧಿ ಈ ತಿಂಗಳ ಕೊನೆಗೆ ಅಂತ್ಯಗೊಳ್ಳಲಿದೆ. ಆದರೆ ಗಂಗೂಲಿ ಅಧ್ಯಕ್ಷರಾಗಿ ಮುಂದುವರಿಸಲು ಅನುವು ಮಾಡಿಕೊಡಬೇಕು ಎಂದು ನಿಯಮ ಬದಲಾವಣೆಗಾಗಿ ಬಿಸಿಸಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಸುಪ್ರೀಂ ಕೋರ್ಟ್ ಈ ಅರ್ಜಿ ವಿಚಾರಣೆಯನ್ನು ಆಗಸ್ಟ್ 17ರವರೆಗೆ ಮುಂದೂಡಿದೆ. ಈ ಮಧ್ಯೆ ಭಾರತ ಬ್ಯಾಟಿಂಗ್ ಲೆಜೆಂಡ್ ಸುನಿಲ್ ಗವಾಸ್ಕರ್ ಕೂಡ ಬಿಸಿಸಿಐ ನಿರ್ಧಾರವನ್ನು ಬೆಂಬಲಿಸಿದ್ದು, ಗಂಗೂಲಿ ಇನ್ನೂ 3 ವರ್ಷಗಳ ಕಾಲ ಬಿಸಿಸಿಐ ಅಧ್ಯಕ್ಷನಾಗಿ ಮುಂದುವರಿಯಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಪತ್ತಿನ ಸಮಯದಲ್ಲಿ ಭಾರತೀಯ ಕ್ರಿಕೆಟ್ ಅನ್ನು ಪುನರುಜ್ಜೀವನಗೊಳಿಸುವುದರಲ್ಲಿ ಗಂಗೂಲಿ ಪಾತ್ರ ಮಹತ್ವವಾದದ್ದು. ಹೀಗಾಗಿ ಬಿಸಿಸಿಐ ಅನ್ನು ಮುನ್ನಡೆಸಲು ಗಂಗೂಲಿ ಉತ್ತಮ ಆಯ್ಕೆ ಎಂದು ಗಾವಸ್ಕರ್ ಹೇಳಿದ್ದಾರೆ.
ಆದ್ರೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಬಿಸಿಸಿಐ ಅಧ್ಯಕ್ಷರಾಗಿರಲು ಒಂದು ವರ್ಷ ಮಾತ್ರ ಅಧಿಕಾರವಿದೆ. ಒಬ್ಬ ವ್ಯಕ್ತಿ ಕ್ರಿಕೆಟ್ ಬೋರ್ಡ್ನಲ್ಲಿ 6 ವರ್ಷ ಮಾತ್ರ ಸತತ ಉನ್ನತ ಹುದ್ದೆ ಅಲಂಕರಿಸಬಹುದು. ಗಂಗೂಲಿ ಈಗಾಗಲೇ 5 ವರ್ಷ ಬಂಗಾಳ ಕ್ರಿಕೆಟ್ ಬೋರ್ಡ್ನ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗಾಗಿ ಜುಲೈ ವೇಳೆಗೆ ಗಂಗೂಲಿ 6 ವರ್ಷ ಅಧಿಕಾರ ನಡೆಸಿದಂತಾಗುತ್ತದೆ.
2023ರ ಏಕದಿನ ವಿಶ್ವಕಪ್ ಭಾರತದಲ್ಲೇ ನಡೆಯಲಿದೆ. ಹೀಗಾಗಿ ಸೌರವ್ ಗಂಗೂಲಿ ಅಧ್ಯಕ್ಷರಾಗಿ ಇದ್ದುಕೊಂಡು ಬಿಸಿಸಿಐ ಮುನ್ನಡೆಸಬೇಕು ಎಂದು ಸುನೀಲ್ ಗಾವಸ್ಕರ್ ಹೇಳಿದ್ದಾರೆ.
ಆಗಸ್ಟ್ನಲ್ಲಿ ಸುಪ್ರಿಂ ತೀರ್ಪು ಗಂಗೂಲಿ ವಿರುದ್ಧ ಬಂದರೆ ಅವರು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುವ ಸಾಧ್ಯತೆಯಿದೆ. ಈಗಾಗಲೆ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಗಂಗೂಲಿ ಬೆಂಬಲಕ್ಕೆ ನಿಂತಿದ್ದು, ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರೇ ಸೂಕ್ತ ಎಂದು ಹೇಳಿಕೊಂಡಿದ್ದಾರೆ.