ನವದೆಹಲಿ: ಗಾಯದಿಂದ ಚೇತಿಸಿಕೊಂಡಿರುವ ಶಿಖರ್ ಧವನ್ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗುತ್ತಿದ್ದಂತೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಫಾರ್ಮ್ಗೆ ಮರಳಿದ್ದಾರೆ.
ಈಗಾಗಲೇ ಟೆಸ್ಟ್ ತಂಡದಿಂದ ಹೊರಬಂದು ವರ್ಷ ಕಳೆದಿರುವ ಶಿಖರ್ ಧವನ್ ಮತ್ತೆ ಟೆಸ್ಟ್ ತಂಡದಲ್ಲಿ ಅವಕಾಶ ಪಡೆಯಲು ರಣಜಿ ಕ್ರಿಕೆಟ್ನಲ್ಲಿ ಪಾಲ್ಗೊಂಡಿದ್ದು ತಾವಾಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಹೈದರಾಬಾದ್ ವಿರುದ್ಧದ ನವದೆಹಲಿಯಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಗಬ್ಬರ್ 147 ಎಸೆತಗಳಲ್ಲಿ ಶತಕ ಸಿಡಿಸಿದರು. ಒಟ್ಟಾರೆ ಮೊದಲ ದಿನದಂತ್ಯಕ್ಕೆ 198 ಎಸೆತಗಳಲ್ಲಿ 19 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 137 ರನ್ಗಳಿಸಿಗಳಿಸುವ ಮೂಲಕ ರಾಷ್ಟ್ರೀಯ ಟೆಸ್ಟ್ ತಂಡಕ್ಕೂ ಎಂಟ್ರಿ ಕೊಡುವ ಮುನ್ಸೂಚನೆ ನೀಡಿದ್ದಾರೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ದೆಹಲಿ ತಂಡ ಹೈದರಾಬಾದ್ ಬೌಲಿಂಗ್ ದಾಳಿಗೆ ತತ್ತರಿಸಿ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದರು, ಮತ್ತೊಂದು ಕಡೆ ಧವನ್ ಗಟ್ಟಿಯಾಗಿ ನಿಂತು ಬೌಂಡರಿಗಳ ಮೇಲೆ ಬೌಂಡರಿ ಬಾರಿಸುತ್ತಾ ತಂಡವನ್ನು ಕುಸಿತದಿಂದ ಪಾರು ಮಾಡುತ್ತಿದ್ದರು. ಇವರ ಶತಕದ ನೆರವಿನಿಂದ ಮೊದಲ ದಿನದಂತ್ಯಕ್ಕೆ ದೆಹಲಿ ತಂಡ 6 ವಿಕೆಟ್ ಕಳೆದುಕೊಂಡು 269 ರನ್ಗಳಿಸಿದೆ. ನಿತೀಸ್ ರಾಣಾ 25, ಅನುಜ್ ರಾವತ್ 29, ಜಾಂಟಿ ಸಿಧು 15, ಲಲಿತ್ ಯಾದವ್ 19 ರನ್ಗಳಿಸಿ ಧವನ್ಗೆ ಸ್ವಲ್ಪ ಸಮಯ ಜೊತೆಯಾಗಿ ತಂಡದ ಮೊತ್ತ 200 ಗಟಿ ದಾಟಲು ನೆರವಾದರು.
ಇದೀಗ ಧವನ್ ಔಟಾಗದೆ 137 ಹಾಗೂ ಕುನ್ವಾರ್ ಬಿಧುರಿ 22 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಹೈದರಾಬಾದ್ ಪರ ಮೊಹಮ್ಮದ್ ಸಿರಾಜ್ 2, ಮೆಹೆದಿ ಹಸನ್ 3, ಮಿಲಂದ್ ಒಂದು ವಿಕೆಟ್ ಪಡೆದು ಮಿಂಚಿದರು.