ನವದೆಹಲಿ : ಅನಾನುಭವಿ ಭಾರತ ತಂಡವನ್ನು ಆಸೀಸ್ ನೆಲದಲ್ಲಿ ಯಶಸ್ವಿಯಾಗಿ ಮುನ್ನಡೆಸಿ ಭಾರತಕ್ಕೆ ಬಾರ್ಡರ್ ಗವಾಸ್ಕರ್ ಟ್ರೋಫಿ ತಂದು ಕೊಟ್ಟಿರುವ ರಹಾನೆ ಲಕ್ಷಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಆದರೆ, ಕೊಹ್ಲಿ ಜೊತೆಗೆ ನಾಯಕತ್ವದ ವಿಷಯವಾಗಿ ಯಾವುದೇ ಮನಸ್ತಾಪವಿಲ್ಲ. ತಾವೂ ಅವಕಾಶ ಸಿಕ್ಕಾಗ ತಂಡವನ್ನು ನಾಯಕನಾಗಿ ಮುನ್ನಡೆಸುವುದಕ್ಕೆ ಖುಷಿಯಿದೆ ಎಂದು ರಹಾನೆ ಹೇಳಿದ್ದಾರೆ.
ಆಸೀಸ್ ನೆಲದಲ್ಲಿ ರಹಾನೆ ನೇತೃತ್ವದ ತಂಡ 2-1ರಲ್ಲಿ ಟೆಸ್ಟ್ ಸರಣಿ ಜಯಿಸಿದೆ. ಇದೀಗ ಫೆಬ್ರವರಿ 5ರಿಂದ ಚೆನ್ನೈನಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಮತ್ತೆ ಕೊಹ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಇದೀಗ ರಹಾನೆ ಮತ್ತೆ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದು, ಈ ಕುರಿತು ತಮಗೆ ಯಾವುದೇ ಬೇಸರವಿಲ್ಲ. ಕೊಹ್ಲಿ ಯಾವಾಗಲೂ ನನ್ನ ನಾಯಕ, ನಾನು ಉಪನಾಯಕನಾಗಿರುತ್ತೇನೆ ಎಂದು ತಿಳಿಸಿದ್ದಾರೆ.
"ಯಾವುದೇ ಬದಲಾವಣೆಯಿಲ್ಲ. ವಿರಾಟ್ ಯಾವಾಗಲೂ ಭಾರತ ತಂಡದ ನಾಯಕ, ನಾನು ಉಪನಾಯಕ. ಅವರು ಯಾವಾಗ ಗೈರಾಗುತ್ತಾರೋ, ಆ ಸಂದರ್ಭದಲ್ಲಿ ತಂಡವನ್ನು ಮುನ್ನಡೆಸುವುದು ನನ್ನ ಕರ್ತವ್ಯ. ಜೊತೆಗೆ ಟೀಂ ಇಂಡಿಯಾ ಯಶಸ್ಸಿಗೆ ಶ್ರಮಿಸುವುದು ನನ್ನ ಜವಾಬ್ದಾರಿ" ಎಂದು ರಹಾನೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಂಡದಲ್ಲಿ ಕೇವಲ ನಾಯಕನಾಗಿರುವುದು ವಿಷಯವಲ್ಲ. ನೀವು ನಾಯಕನ ಪಾತ್ರವನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದು ಹೆಚ್ಚು ಮುಖ್ಯವಾಗಿದೆ. ನಾನು ಈವರೆಗೆ ಸಿಕ್ಕಸಿರುವ ಅವಕಾಶದಲ್ಲಿ ಯಶಸ್ವಿಯಾಗಿದ್ದೇನೆ. ಭವಿಷ್ಯದಲ್ಲೂ ಸಹ ನನ್ನ ತಂಡಕ್ಕೆ ಈ ರೀತಿಯ ಫಲಿತಾಂಶಗಳನ್ನು ನೀಡಲು ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ನಾಯಕ ವಿರಾಟ್ ಜೊತೆಗಿನ ಸಂಬಂಧ ಹೇಗಿದೆ ಎಂದು ಕೇಳಿದ್ದಕ್ಕೆ ಉತ್ತರಿಸಿರುವ ರಹಾನೆ "ನಾನು ಮತ್ತು ವಿರಾಟ್ ಸದಾ ಪರಸ್ಪರ ಉತ್ತಮ ವಿಷಯಗಳನ್ನು ಹಂಚಿಕೊಳ್ಳುತ್ತೇವೆ. ಅವರು ನನ್ನ ಬ್ಯಾಟಿಂಗ್ ಪ್ರಶಂಸಿಸಿದ್ದಾರೆ.
ನಾವಿಬ್ಬರೂ ಭಾರತ ಮತ್ತು ವಿದೇಶಿ ಪರಿಸ್ಥಿತಿಗಳಲ್ಲಿ ನಮ್ಮ ತಂಡಕ್ಕೆ ಸ್ಮರಣೀಯವಾದ ಆಟಗಳನ್ನು ನೀಡಿದ್ದೇವೆ. ವಿರಾಟ್ ನಂ.4 ಮತ್ತು ನಾನು ನಂ.5ರಲ್ಲಿ ಆಡುವುದರಿಂದ ಸಾಕಷ್ಟು ಪಾಲುದಾರಿಕೆಗಳನ್ನು ಹೊಂದಿದ್ದೇವೆ" ಎಂದು 32 ವರ್ಷದ ಆಟಗಾರ ಹೇಳಿದರು.
ಇದನ್ನು ಓದಿ : ಕೊಹ್ಲಿ ಭಾರತವನ್ನು ಕಠಿಣವಾಗಿಸಿದ್ದಾರೆ, ಯಾರಿಂದಲೂ ಬೆದರಿಸಲಾಗುವುದಿಲ್ಲ: ನಾಸಿರ್ ಹುಸೇನ್